ಬಾಗಲಕೋಟೆ : ಆರ್ಕೆಸ್ಟ್ರಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಕರ್ನಾಟಕ ಭಾಗದ ಖ್ಯಾತ ಯೂಟ್ಯೂಬ್ ಸ್ಟಾರ್ ಹಾಗೂ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾಲಿಂಗಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಮಹಾರಾಷ್ಟ್ರಕ್ಕೆ ಪರಾರಿಯಾಗುತ್ತಿದ್ದ ಸಿಂಗರ್ ಮೈಲಾರಿಯನ್ನು ಚೇಸ್ ಮಾಡಿ ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮ್ಯೂಸಿಕ್ ಮೈಲಾರಿ ಉತ್ತರ ಕರ್ನಾಟಕ ಜನಪದ ಸಿಂಗರ್. ಯ್ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಹೆಸರಾಗಿದ್ದಾನೆ. ಈತನ ಮೇಲೆ ಮಹಾಲಿಂಗಪುರ ಹೊರವಲಯದ ಲಾಡ್ಜ್ ಒಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು. ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ಅ.24 ರಂದು ಹನುಮಂತ ದೇವರ ಓಕುಳಿ ಕಾರ್ಯಕ್ರಮವಿತ್ತು. ಅಂದು ಊರಲ್ಲಿ ಆರ್ಕೆಷ್ಟ್ರಾ ಆಯೋಜಿಸಲಾಗಿತ್ತು. ಅಲ್ಲಿ ಹಾಡಲು ಮೈಲಾರಿ ಬಂದಿದ್ದ. ಅದೇ ಆರ್ಕೆಷ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಅಪ್ರಾಪ್ತೆ ಬಂದಿದ್ದಳು. ಈ ಅವಧಿಯಲ್ಲಿ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು.
ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ. ಡಿ.14ರಂದು ಚಿಕ್ಕೋಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಡಿ.15 ರಂದು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಪೋಕ್ಸೊ ಅಡಿ ಎಫ್‌ಐಆರ್ ದಾಖಲಾಗಿದೆ. ಮ್ಯೂಸಿಕ್ ಮೈಲಾರಿ, ಶಂಕರ್ ಅಥಣಿ, ಸಿಂಗರ್ ದಾನವಿ, ಬೆಂಕಿ ಲತಾ, ಸಿಂಗರ್ ರುಕ್ಮಿಣಿ, ಡಿಜೆ ಮಹಾಂತೇಶ್ ಸೇರಿ ಏಳು ಜನರ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ : ಐಪಿಎಲ್ 2026 ಹರಾಜು | ಇಲ್ಲಿದೆ ಎಲ್ಲಾ 10 ತಂಡಗಳ ಸಂಪೂರ್ಣ ಪಟ್ಟಿ!



















