ಹಾಸನ: ಸಾರಿಗೆ (KSRTC) ಬಸ್, ಗ್ಯಾಸ್ ಟ್ಯಾಂಕರ್(Gas Tanker) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವತ್ತಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಮಾರನಹಳ್ಳಿ ಬಳಿ ಈ ಘಟನೆ ನಡೆದಿದೆ. ಬಸ್ ನಲ್ಲಿದ್ದ ಮೂವತ್ತಕ್ಕೂ ಅಧಿಕ ಜನ ಗಾಯಗೊಂಡಿದ್ದು, 15 ಜನರ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಮಣಿ ಡಿಪೋದ ಸಾರಿಗೆ ಬಸ್ ಚಿಕ್ಕಬಳ್ಳಾಪುರದಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.