ನವದೆಹಲಿ: ಪ್ರತಿಪಕ್ಷಗಳ ಭಾರೀ ಗದ್ದಲ, ಕೋಲಾಹಲದ ನಡುವೆಯೇ ಗುರುವಾರ ವಿವಾದಿತ ವಕ್ಫ್ ತಿದ್ದುಪಡಿ ವಿಧೇಯಕ, 2024 ಅನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಬಳಿಕ ಸ್ವೀಕರಿಸಲಾಗಿದೆ. ವಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ ಕಾರಣ ಸಭಾಧ್ಯಕ್ಷ ಜಗದೀಪ್ ಧನ್ಕರ್ ಸ್ವಲ್ಪ ಕಾಲ ಕಲಾಪವನ್ನು ಮುಂದೂಡಿಕೆ ಮಾಡಿದ ಪ್ರಸಂಗವೂ ನಡೆದಿದೆ.
ಈ ವಿಧೇಯಕವು ವಕ್ಫ್ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ ಅವರು ವರದಿಯನ್ನು ಮಂಡಿಸಿದ ಕೂಡಲೇ, ಪ್ರತಿಪಕ್ಷಗಳ ಸಂಸದರು ಪ್ರತಿರೋಧದ ಟಿಪ್ಪಣಿಗಳ ಕೆಲವು ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ, ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದರ ನಡುವೆ, ಧನ್ಕರ್ ಅವರು ರಾಷ್ಟ್ರಪತಿಯವರ ಸಂದೇಶವನ್ನು ಓದಲು ಪ್ರಯತ್ನಿಸುತ್ತಿದ್ದಂತೆ, ವಿಪಕ್ಷ ಸಂಸದರು ಕೋಲಾಹಲ ಮುಂದುವರಿಸಿದರು. ವರದಿ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರನಡೆದವು.
ಫೇಕ್ ವರದಿ ಒಪ್ಪುವುದಿಲ್ಲ: ಖರ್ಗೆ
ನಮ್ಮ ಅಭಿಪ್ರಾಯಗಳನ್ನು ಬುಡಮೇಲು ಮಾಡುವಂತಹ ನಕಲಿ ಮತ್ತು ಸುಳ್ಳು ವರದಿಗಳನ್ನು ಪ್ರತಿಪಕ್ಷಗಳು ಒಪ್ಪುವುದೂ ಇಲ್ಲ, ಸ್ವೀಕರಿಸುವುದೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ವರದಿಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಾಪಸ್ ಕಳುಹಿಸಿ, ಮತ್ತೆ ಮಂಡಿಸಬೇಕು ಎಂದೂ ಒತ್ತಾಯಿಸಿದರು.
“ಜೆಪಿಸಿ ವರದಿಯಲ್ಲಿ, ಅನೇಕ ಸದಸ್ಯರು ಪ್ರತಿರೋಧ ಟಿಪ್ಪಣಿಯನ್ನು ಮಾಡಿದ್ದಾರೆ. ಅವುಗಳನ್ನು ತೆಗೆದುಹಾಕುವುದು ಮತ್ತು ನಮ್ಮ ಅಭಿಪ್ರಾಯಗಳನ್ನು ಗಾಳಿಗೆ ತೂರುವುದು ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂತಹ ಸುಳ್ಳು ವರದಿಗಳನ್ನು ನಾವು ಎಂದಿಗೂ ಸ್ವೀಕರಿಸುವುದಿಲ್ಲ” ಎಂದು ಖರ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ಖರ್ಗೆ ಅವರ ವಾದವನ್ನು ಇಂಡಿಯಾ ಒಕ್ಕೂಟದ ಬಹುತೇಕ ಸಂಸದರು ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಜೆಪಿಸಿ ಸಭೆಗಳಲ್ಲಿ ಪರಿಚ್ಛೇದವಾರು ಚರ್ಚೆಗಳು ನಡೆದಿಲ್ಲ ಎಂದು ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಆರೋಪಿಸಿದರು. ಈ ಕಾರಣದಿಂದಾಗಿಯೇ, ನಾವು ಪ್ರತಿರೋಧದ ಟಿಪ್ಪಣಿಯನ್ನು ನೀಡಿದ್ದೇವೆ. ಆದರೆ ಸರ್ಕಾರ ನಾವು ನೀಡಿದ ಟಿಪ್ಪಣಿಯನ್ನು ತೆಗೆದುಹಾಕಿದೆ” ಎಂದು ಆರೋಪಿಸಿದರು.
ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ಪ್ರತಿರೋಧದ ಟಿಪ್ಪಣಿಗಳನ್ನು ವರದಿಯ ಅನುಬಂಧದಲ್ಲಿ ಲಗತ್ತಿಸಲಾಗಿದೆ. ಆದರೆ ಪ್ರತಿಪಕ್ಷಗಳು ಸದನದ ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು. “ವರದಿಯಿಂದ ಯಾವುದೇ ಅಳಿಸುವಿಕೆ ಅಥವಾ ತೆಗೆದುಹಾಕುವಿಕೆ ನಡೆದಿಲ್ಲ. ಪ್ರತಿಪಕ್ಷದ ಸದಸ್ಯರು ಅನಗತ್ಯ ವಿಷಯವನ್ನು ಸೃಷ್ಟಿಸುತ್ತಿದ್ದಾರೆ” ಎಂದೂ ಆರೋಪಿಸಿದರು.