ಬೆಂಗಳೂರು : ನಗರದ ಸರ್ಜಾಪುರದಲ್ಲಿನ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ, ವಿವಿಯ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ ಸಂಜೆಯಿಂದ ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ವಿವಿಯೊಳಗೆ ನುಗ್ಗಿದ ಕಾರ್ಯಕರ್ತರು ವಿವಿಯ ನಾಮಫಲಕಕ್ಕೆ ಮಸಿ ಬಳಿದು ತೀವ್ರ ಆಕ್ರೋಶ ಹೊರಹಾಕಿದ್ಧಾರೆ. “ವಿದ್ಯಾಸಂಸ್ಥೆಗಳು ಜ್ಞಾನಾರ್ಜನೆಯ ಕೇಂದ್ರವಾಗಬೇಕು. ಆದರೆ, ಇಂದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳೇ ದೇಶವಿರೋಧಿ ಚಟುವಟಿಕೆಗಳ ತಾಣವಾಗಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) ಎನ್ನುವ ವಿದ್ಯಾರ್ಥಿ ಸಂಘಟನೆ ಕಳೆದ ಅನೇಕ ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ” ಎಂದು ಎಬಿವಿಪಿ ಆರೋಪಿಸಿದೆ.

“AISA ಪ್ರಾಯೋಜಿತ SPARK ಎಂಬ ಸಂಸ್ಥೆಯ ಮೂಲಕ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಿಂತನೆಗಳ ಕೂಟಗಳನ್ನು ನಡೆಸುತ್ತಾ ದೇಶದ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳು, ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ” ಎನ್ನುತ್ತಾ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.

“ಭಾರತದ ಮುಕುಟಮಣಿ ಕಾಶ್ಮೀರ ಭಾರತದ ಭಾಗವಲ್ಲ. ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ. ಯುವ ಮನಸುಗಳಲ್ಲಿ ದೇಶವಿರೋಧಿ ಚಿಂತನೆಯನ್ನು ಬಿತ್ತಲಾಗುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನಿನ್ನೆ ರಾತ್ರಿಯೂ ಪ್ರತಿಭಟನೆ ಮುಂದುವರಿದ್ದು, ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಹಲವು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಎಫ್-16 ಫೈಟರ್ ಜೆಟ್ ಪತನ.. ಪೈಲಟ್ ಸಜೀವ ದಹನ



















