ಹಾಸನ: ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ದುರುಪಯೋಗವಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನೇನು ನಡೆಯುತ್ತಿದೆನ ಎಂಬುವುದನ್ನು ಗಮನಿಸಿದ್ದೇನೆ. ಕರ್ನಾಟಕದ ಪೊಲೀಸ್ ಇಲಾಖೆಗೆ ದೇಶದಲ್ಲಿ ಗೌರವಯುತ ಸ್ಥಾನವಿದೆ. ದುರಾದೃಷ್ಟ ಎಂದರೆ ಆ ಗೌರವವನ್ನು ಹಾಳು ಮಾಡಲಾಗುತ್ತಿದೆ. ಇವತ್ತು ಸರ್ಕಾರದಲ್ಲಿರುವ ಮಂತ್ರಿಗಳು ಕೆಲವು ಆಯ್ದ ಪೊಲೀಸ್ ಅಧಿಕಾರಿಗಳಿಗೆ ಡೈರೆಕ್ಷನ್ ಕೊಡುವ ಮೂಲಕ ಕಾನೂನು ಬಾಹಿರವಾದಂತಹ ತೀರ್ಮಾನಗಳಾಗುತ್ತಿವೆ. ಬೇಕಾದಂತೆ ಕೇಸ್ ಗಳನ್ನು ಬುಕ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಸಿಡಿ ಬಿಟ್ಟಿದ್ದೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ನವರ ಕೊಡುಗೆ. ಅದು ಬಿಟ್ಟು ಹಾಸನ ಜಿಲ್ಲೆಗೆ ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬ ನಮ್ಮ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದೆ. ಹೀಗಾಗಿಯೇ ಇಲ್ಲಿಯ ಜನರು ನಮ್ಮನ್ನು ತಮ್ಮ ಸೇವೆಗೆ ಸದಾ ಆಯ್ಕೆ ಮಾಡುತ್ತಿರುವುದು ಎಂದು ಹೇಳಿದ್ದಾರೆ.