ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಅರೆಸ್ಟ್ ಆಗಿದ್ದಾರೆ.
ಹಾಸನದ ಸೆನ್ ಪೊಲೀಸ್ ಠಾಣೆಯಲ್ಲಿಯೇ (SEN Police Hassan) ಪೊಲೀಸರು ಬಂಧಿಸಿದ್ದಾರೆ. ಶಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್ಪಿಗೂ ದೂರಿನ ಪ್ರತಿ ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸೂರಜ್ ರೇವಣ್ಣ ನನಗೆ ಚುನಾವಣೆ ಸಂದರ್ಭದಲ್ಲಿ ಪರಿಚಯವಾಗಿದ್ದರು. ನಾನು ಅವರ ತಮ್ಮ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನ್ನ ನಂಬರನ್ನು ಸೂರಜ್ ತೆಗೆದುಕೊಂಡಿದ್ದರು. ಜೂ.14 ರಂದು ಸೂರಜ್ ನನಗೆ ಮೆಸೇಜ್ ಮಾಡಿದ್ದರು. ಮೆಸೇಜ್ ನಲ್ಲಿ ನನ್ನ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದರು. ನಂತರ ಜೂ.16 ರಂದು ಹೊಳೆನರಸೀಪುರ ತಾಲೂಕಿನ, ಗನ್ನೀಕಡ ತೋಟಕ್ಕೆ ಸಂಜೆ ಬರಲು ಹೇಳಿದ್ದರು.
ನಾನು ಹೋದ ಸಂದರ್ಭದಲ್ಲಿ ಅವರೊಬ್ಬರೇ ಇದ್ದರು. ನನಗೆ ಇಷ್ಟವಿಲ್ಲದಿದ್ದರೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಆ ಸಂದರ್ಭ ನನಗೆ ಪುರುಷರನ್ನು ಕಂಡರೆ ಆಸಕ್ತಿ ಮಹಿಳೆಯರನ್ನು ಕಂಡರೆ ಆಸಕ್ತಿ ಇಲ್ಲ ಎಂದು ಹೇಳಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.