ದುಬೈ: 2025ರ ಏಷ್ಯಾ ಕಪ್ ಟೂರ್ನಿಯುದ್ದಕ್ಕೂ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್ ಹೊಳೆಯನ್ನೇ ಹರಿಸಿರುವ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸೂಪರ್-4ರ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ 61 ರನ್ ಚಚ್ಚಿದ ಅವರು, ಟಿ20 ಏಷ್ಯಾ ಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ, ಆಧುನಿಕ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರ ದಾಖಲೆಗಳನ್ನು ಮುರಿದುಹಾಕಿದ್ದಾರೆ.
ಕೊಹ್ಲಿ, ರಿಝ್ವಾನ್ ದಾಖಲೆ ಪತನ
2022ರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ 6 ಪಂದ್ಯಗಳಿಂದ 281 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಅದೇ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 5 ಪಂದ್ಯಗಳಿಂದ 276 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಅಭಿಷೇಕ್ ಶರ್ಮಾ, ಈ ಇಬ್ಬರ ದಾಖಲೆಗಳನ್ನೂ ಧೂಳೀಪಟ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದ 5ನೇ ಓವರ್‌ನಲ್ಲಿ ದುಷ್ಮಂತ ಚಮೀರಾಗೆ ಸಿಕ್ಸರ್ ಬಾರಿಸುವ ಮೂಲಕ ಅವರು ಈ ಐತಿಹಾಸಿಕ ಮೈಲಿಗಲ್ಲನ್ನು ದಾಟಿದರು.
ಅಭಿಷೇಕ್ ಅಬ್ಬರಕ್ಕೆ ತತ್ತರಿಸಿದ ಎದುರಾಳಿಗಳು
ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಕೇವಲ ರನ್ ಗಳಿಸಿದ್ದಷ್ಟೇ ಅಲ್ಲ, ಅದನ್ನು ಗಳಿಸಿದ ರೀತಿ ಕೂಡ ಅದ್ಭುತವಾಗಿತ್ತು. ಇಲ್ಲಿಯವರೆಗೆ ಆಡಿದ 6 ಪಂದ್ಯಗಳಿಂದ 51.50ರ ಸರಾಸರಿ ಮತ್ತು 204.64ರ ಸ್ಪೋಟಕ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 309 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಅವರ ಸ್ಥಿರ ಮತ್ತು ಆಕ್ರಮಣಕಾರಿ ಆಟವೇ ಭಾರತ ತಂಡವು ಏಷ್ಯಾ ಕಪ್ ಫೈನಲ್‌ಗೆ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ.
ಈಗಾಗಲೇ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿರುವ 25ರ ಹರೆಯದ ಅಭಿಷೇಕ್ ಶರ್ಮಾ, ಈ ಟೂರ್ನಿಯ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಇದೀಗ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಅವರ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.



















