ನವದೆಹಲಿ : 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ಹೆಡ್ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕಗೊಂಡಿದ್ದಾರೆ. ಆ ಮೂಲಕ ಚಂದ್ರಕಾಂತ್ ಪಂಡಿತ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡಕ್ಕೆ ಚಂದ್ರಕಾಂತ್ ಪಂಡಿತ್ ಮುಖ್ಯ ಕೋಚ್ ಆಗಿದ್ದರು. ಅಭಿಷೇಕ್ ನಾಯರ್ ಅವರು ಹಲವು ವರ್ಷಗಳ ಕಾಲ ಕೋಲ್ಕತಾ ಫ್ರಾಂಚೈಸಿಯಲ್ಲಿ ಸಹಾಯಕ ಕೋಚ್ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೀಗ ಅವರು ಕೆಕೆಆರ್ ತಂಡದ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ.
ಇತ್ತೀಚೆಗೆ ಅಭಿಷೇಕ್ ನಾಯರ್ ಅವರು ಭಾರತ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಅವರನ್ನು ಈ ಹುದ್ದೆಯಿಂದ ತೆಗೆಯಲಾಗಿತ್ತು. ಏಕೆಂದರೆ, ಕಳೆದ ವರ್ಷ ಭಾರತ ತಂಡ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರು ಟೆಸ್ಟ್ ಸರಣಿಗಳನ್ನು ಸೋತಿತ್ತು. ಅಂದ ಹಾಗೆ ಅಭಿಷೇಕ್ ನಾಯರ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಅವರು ಕೋಚಿಂಗ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇವರು ರಿಂಕು ಸಿಂಗ್, ಹರ್ಷಿತ್ ರಾಣಾ ಸೇರಿದಂತೆ ಹಲವು ಯುವ ಪ್ರತಿಭೆಗಳಿಗೆ ಕೋಚ್ ಮಾಡಿದ್ದಾರೆ.
2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಕಪ್ ಗೆದ್ದಾಗ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಅಭಿಷೇಕ್ ನಾಯರ್ ಸಹಾಯಕ ಕೋಚ್ ಆಗಿದ್ದರು. ಕಳೆದ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡಕ್ಕೆ ಹೆಡ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಅವರು ಮತ್ತೆ ಕೋಲ್ಕತಾ ನೈಟ್ ರೈಡರ್ಸ್ ದೊಡ್ಡ ಹುದ್ದೆಯ ಮೂಲಕ ಮರಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಅಭಿವೃದ್ಧಿಗೆ 2,296 ಕೋಟಿ ಅನುದಾನಕ್ಕೆ ಸಂಪುಟ ಗ್ರೀನ್ ಸಿಗ್ನಲ್



















