ಒಟ್ಟಾವಾ: ಕೆನಡಾದಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆ 21 ವರ್ಷದ ಭಾರತೀಯ ವಿದ್ಯಾರ್ಥಿನಿ (Indian student found dead:) ಒಟ್ಟಾವಾದಲ್ಲಿನ ತನ್ನ ಕಾಲೇಜಿನ ಬಳಿಯ ಕಡಲತೀರದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ದೃಢಪಡಿಸಿದೆ. ಮೃತ ವಿದ್ಯಾರ್ಥಿನಿಯನ್ನು ಪಂಜಾಬ್‌ನ ಡೇರಾ ಬಸ್ಸಿಯ ಸ್ಥಳೀಯ ಎಎಪಿ(ಆಮ್ ಆದ್ಮಿ ಪಕ್ಷ) ನಾಯಕನ ಪುತ್ರಿ ವಂಶಿಕಾ ಎಂದು ಗುರುತಿಸಲಾಗಿದೆ.
“ಒಟ್ಟಾವಾದಲ್ಲಿ ಭಾರತದ ವಿದ್ಯಾರ್ಥಿನಿ ವಂಶಿಕಾ ಅವರ ಸಾವಿನ ಬಗ್ಗೆ ತಿಳಿಸಲು ನಮಗೆ ಬಹಳ ದುಃಖವಾಗುತ್ತಿದೆ. ಈ ವಿಷಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ಥಳೀಯ ಪೊಲೀಸರ ಪ್ರಕಾರ ತನಿಖೆ ಪ್ರಗತಿಯಲ್ಲಿದೆ” ಎಂದು ರಾಯಭಾರ ಕಚೇರಿ ಪ್ರಕಟಿಸಿದೆ.
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವಂಶಿಕಾ ನಾಪತ್ತೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಏಪ್ರಿಲ್ 25 ರ ಶುಕ್ರವಾರ ರಾತ್ರಿ 8-9ರ ಸುಮಾರಿಗೆ ಬಾಡಿಗೆ ಮನೆಯನ್ನು ಹುಡುಕುವುದಾಗಿ ಹೇಳಿ ಹೋಗಿದ್ದ ವಂಶಿಕಾ ಮನೆಗೆ ಹಿಂದಿರುಗಿಲ್ಲ. ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇವತ್ತು ಆಕೆ ಒಂದು ಮಹತ್ವದ ಪರೀಕ್ಷೆಯನ್ನೂ ಬರೆಯಬೇಕಿತ್ತು. ಆದರೆ ಅವಳು ಪರೀಕ್ಷೆಗೂ ಹಾಜರಾಗದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆಯಲಾಗಿತ್ತು.
ಬಾಡಿಗೆ ಕೊಠಡಿ ನೋಡಲು ರಾತ್ರಿ 7 ಮೆಜೆಸ್ಟಿಕ್ ಡ್ರೈವ್‌ನಲ್ಲಿದ್ದ ತನ್ನ ನಿವಾಸದಿಂದ ಹೊರಟ ವಂಶಿಕಾ ಏಪ್ರಿಲ್ 25, 2025ರ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಆ ರಾತ್ರಿ ಸುಮಾರು 11:40 ಕ್ಕೆ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಅವಳು ಪರೀಕ್ಷೆಗೂ ಗೈರಾಗಿದ್ದಳು. ಆಕೆಯ ಕುಟುಂಬ ಮತ್ತು ಸ್ನೇಹಿತರು ಎಷ್ಟೇ ಹುಡುಕಾಟ ನಡೆಸಿದರೂ ಆಕೆ ಎಲ್ಲಿದ್ದಾಳೆ ಎಂಬುದರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ಒಟ್ಟಾವಾದ ಹಿಂದೂ ಸಮುದಾಯವೂ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿತ್ತು.
ವಂಶಿಕಾ ಸಾಮಾನ್ಯವಾಗಿ ಪ್ರತಿದಿನ ಬೆಳಿಗ್ಗೆ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು. ಆದರೆ, ಏಪ್ರಿಲ್ 25ರಿಂದ ಆಕೆ ಯಾರನ್ನೂ ಸಂಪರ್ಕಿಸಿಲ್ಲ ಎಂಬುದು ತಿಳಿದುಬಂದಿತ್ತು.
ಏಪ್ರಿಲ್ 25 ರಂದು ತನ್ನ ಮಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದೇನೆ. ಎಂದಿನಂತೆಯೇ ಆಕೆ ಸಹಜವಾಗಿಯೇ ಮಾತನಾಡಿದ್ದಳು ಎಂದು ಆಕೆಯ ತಂದೆ ದವೀಂದರ್ ಸೈನಿ ಹೇಳಿದ್ದಾರೆ. ಮಂಗಳವಾರ, ಭಾರತೀಯ ರಾಯಭಾರ ಕಚೇರಿಯು ನಮ್ಮನ್ನು ಸಂಪರ್ಕಿಸಿ, ನಿಮ್ಮ ಮಗಳು ಸಾವಿಗೀಡಾಗಿದ್ದಾಳೆ ಎಂದು ತಿಳಿಸಿತು ಎಂದಿದ್ದಾರೆ. ಆಕೆಯ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಇತ್ತೀಚೆಗಷ್ಟೇ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ (21) ಗುಂಡಿನ ಚಕಮಕಿ ವೇಳೆ ಗುಂಡು ತಗುಲಿ ಸಾವಿಗೀಡಾಗಿದ್ದಳು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಅದಕ್ಕೂ ಮೊದಲು ಒಟ್ಟಾವಾ ಬಳಿಯ ರಾಕ್ಲ್ಯಾಂಡ್ ಪಟ್ಟಣದಲ್ಲಿ ಮತ್ತೊಬ್ಬ ಭಾರತೀಯ ಪ್ರಜೆಯನ್ನು ಮಾರಣಾಂತಿಕವಾಗಿ ಇರಿದು ಕೊಲ್ಲಲಾಗಿತ್ತು.