ಚಂಡೀಗಢ: ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಭೀಕರ ಹತ್ಯೆಯೊಂದು ನಡೆದಿದ್ದು, ಆಮ್ ಆದ್ಮಿ ಪಾರ್ಟಿಯ (ಆಪ್) ಸ್ಥಳೀಯ ನಾಯಕ ಲಕ್ಕಿ ಒಬೆರಾಯ್ ಅವರನ್ನು ದುಷ್ಕರ್ಮಿಗಳು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾರೆ. ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಮಾಡೆಲ್ ಟೌನ್‌ನಲ್ಲಿರುವ ಗುರುದ್ವಾರ ಸಾಹಿಬ್‌ನ ಹೊರಗಡೆ ಈ ಘಟನೆ ನಡೆದಿದ್ದು, ಇಡೀ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಲಕ್ಕಿ ಒಬೆರಾಯ್ ಅವರು ತಮ್ಮ ಥಾರ್ ಕಾರಿನಲ್ಲಿ ಕುಳಿತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ದಾಳಿ ನಡೆಸಿದ್ದಾರೆ. ಕಪ್ಪು ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ಕಾರಿನ ಸಮೀಪ ಬಂದು ಅತಿ ಸಮೀಪದಿಂದ ಗುಂಡಿನ ಮಳೆಗರೆದಿದ್ದಾನೆ. ಒಬೆರಾಯ್ ಅವರ ದೇಹಕ್ಕೆ ಕನಿಷ್ಠ ಐದು ಗುಂಡುಗಳು ಹೊಕ್ಕಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಹತ್ಯೆಯ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ದಾಳಿಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗುಂಡು ಹಾರಿಸಿದ ನಂತರ ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೊಲೆಗಾರರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ರಾಜಕೀಯ ದ್ವೇಷವೇ ಅಥವಾ ವೈಯಕ್ತಿಕ ಕಾರಣಗಳೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಮೃತ ಲಕ್ಕಿ ಒಬೆರಾಯ್ ಅವರು ಎಎಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು ಮತ್ತು ಕಂಟೋನ್ಮೆಂಟ್ ಕ್ಷೇತ್ರದ ಉಸ್ತುವಾರಿ ರಾಜವಿಂದರ್ ಕೌರ್ ಥಿಯಾಡಾ ಅವರ ಆಪ್ತರಾಗಿದ್ದರು ಎಂದು ತಿಳಿದುಬಂದಿದೆ. ಅವರ ಪತ್ನಿ ಈ ಹಿಂದೆ ಎಎಪಿ ಟಿಕೆಟ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹತ್ಯೆಯ ನಂತರ ಮಾಡೆಲ್ ಟೌನ್ ಪ್ರದೇಶದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸಾಕ್ಷಿಗಳ ವಿಚಾರಣೆ ಮತ್ತು ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಣೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ‘ಘೂಸ್‌ಖೋರ್ ಪಂಡತ್’ ಚಿತ್ರದ ವಿರುದ್ಧ FIR ದಾಖಲಿಸಲು ಯೋಗಿ ಆದಿತ್ಯನಾಥ್ ಆದೇಶ | ಮನೋಜ್ ಬಾಜಪೇಯಿ ಸ್ಪಷ್ಟನೆ



















