ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ಆಪ್-ಬಿಜೆಪಿ-ಕಾಂಗ್ರೆಸ್ ನಡುವಿನ ಪೋಸ್ಟರ್ ವಾರ್ ತೀವ್ರಗೊಂಡಿದೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ಪ್ರಚಾರದ ಪೋಸ್ಟರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋ ಕೂಡ ಕಾಣಿಸಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಕ್ಷ ಬಹಿರಂಗವಾಗಿಯೇ ತೊಡೆ ತಟ್ಟಿರುವುದು ಸ್ಪಷ್ಟವಾಗಿದೆ.
“ಕೇಜ್ರಿವಾಲ್ ಅವರ ಪ್ರಾಮಾಣಿಕತೆಯು ಉಳಿದ ಎಲ್ಲ ಅಪ್ರಾಮಾಣಿಕರ ವಿರುದ್ಧ ಜಯಿಸಲಿದೆ” ಎಂಬ ಶೀರ್ಷಿಕೆಯುಳ್ಳ ಪೋಸ್ಟರ್‌ವೊಂದನ್ನು ಆಮ್ ಆದ್ಮಿ ಪಕ್ಷ ದೆಹಲಿಯಾದ್ಯಂತ ಅಂಟಿಸಿದೆ. ಈ ಪೋಸ್ಟರ್‌ನಲ್ಲಿ ಪ್ರಾಮಾಣಿಕ ವ್ಯಕ್ತಿ ಎಂದು ಅರವಿಂದ ಕೇಜ್ರಿವಾಲ್ ರನ್ನು ಚಿತ್ರಿಸಲಾಗಿದ್ದು, ಮತ್ತೊಂದೆಡೆ “ಅಪ್ರಾಮಾಣಿಕರು ಪಟ್ಟಿ”ಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಬಿಜೆಪಿ ನಾಯಕರ ಹೆಸರುಗಳಿವೆ. ವಿಶೇಷವೆಂಬಂತೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನೂ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಕೇಜ್ರಿವಾಲ್ ಸರ್ಕಾರದ ಆಡಳಿತದ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಉಲ್ಲೇಖಿಸಿ ಆಪ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ದೆಹಲಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕೇಜ್ರಿವಾಲ್ ಸಮನಾಗಲು ಸಾಧ್ಯವೇ ಇಲ್ಲ. ದೆಹಲಿಗೆ ಬೇಕಾಗಿರುವುದು ಶೀಲಾ ದೀಕ್ಷಿತ್ ಮಾದರಿ ನೈಜ ಅಭಿವೃದ್ದಿಯೇ ಹೊರತು ಪ್ರಧಾನಿ ಮೋದಿ ಹಾಗೂ ಕೇಜ್ರಿವಾಲ್ ರಂಥವರ ಸುಳ್ಳಿನ, ಪಿಆರ್ ಮಾದರಿಯ ಅಭಿವೃದ್ಧಿ ಅಲ್ಲ ಎಂದು ಹೇಳಿದ್ದರು.
ಅಲ್ಲದೆ, ಮಾಲಿನ್ಯ ಹೆಚ್ಚಳ, ಭ್ರಷ್ಟಾಚಾರ, ಹಣದುಬ್ಬರದಂಥ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಕೇಜ್ರಿವಾಲ್ ಅವರೂ ಪ್ರಧಾನಿ ಮೋದಿಯವರಂತೆ ಸುಳ್ಳಿನ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇವರಿಬ್ಬರೂ ದಲಿತರು ಮತ್ತು ಬುಡಕಟ್ಟು ಜನರ ವಿರೋಧಿಗಳು ಎಂದೂ ರಾಹುಲ್ ಹೇಳಿದ್ದರು. ಅಲ್ಲದೇ, ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಅವರು ಕೇಜ್ರಿವಾಲ್‌ರನ್ನು ದೇಶದ್ರೋಹಿ ಎಂದು ಕರೆದಿದ್ದರು.
ಇನ್ನೊಂದೆಡೆ, ಶನಿವಾರ ಬಿಜೆಪಿ ಕೂಡ ಹೊಸ ಪೋಸ್ಟರ್ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಿದೆ. “ಫೆಬ್ರವರಿ 5ರಂದು ಗೂಂಡಾಗಳು, ಕ್ರಿಮಿನಲ್ ಗಳೇ ತುಂಬಿರುವ ಆಪ್‌ನ ಆಪತ್ತಿನ ಗ್ಯಾಂಗ್‌ಗೆ ದೆಹಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ!” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆ ಫೆ.5ರಂದು ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.