ಬೆಂಗಳೂರು: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ 89 ಹುದ್ದೆಗಳ ನೇಮಕಾತಿಗಾಗಿ ಅರ್ಜಿ (AAI Recruitment 2025) ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಜ್ಯೂನಿಯರ್ ಅಸಿಸ್ಟಂಟ್ (ಫೈರ್ ಸರ್ವಿಸ್) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಏಪ್ರಿಲ್ 11 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಜತೆಗೆ 3 ವರ್ಷದ ಡಿಪ್ಲೋಮಾ ಶಿಕ್ಷಣವನ್ನು ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ಅಥವಾ ಫೈಯರ್ ವಿಷಯದಲ್ಲಿ ಪಡೆದಿರಬೇಕು. ಇಲ್ಲವೇ, ದ್ವಿತೀಯ ಪಿಯುಸಿ ರೆಗ್ಯುಲರ್ ನಲ್ಲಿ ಓದಿರಬೇಕು. ಅಭ್ಯರ್ಥಿಗಳು ಡ್ರೈವಿಂಗ್ ಲೈಸನ್ಸ್ ಅನ್ನು ಕೂಡ ಹೊಂದಿರಬೇಕು. ಸಹಿಷ್ಣುತಾ ಪರೀಕ್ಷೆ, ದೈಹಿಕ ಸಾಮಾರ್ಥ್ಯ ಪರೀಕ್ಷೆಗಳನ್ನು ನಡೆಸಿ, ಪ್ರದರ್ಶನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ ಇದೆ. ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ತೇರ್ಗಡೆ ಹೊಂದಲು 100 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಒಬಿಸಿ, ಸಾಮಾನ್ಯ, ಇಡಬ್ಲ್ಯೂಎಸ್ ಅಭ್ಯರ್ಥಿಗಳು, ಕನಿಷ್ಠ 40 ಅಂಕಗಳನ್ನು ಎಸ್ ಸಿ ಹಾಗೂ ಎಸ್ ಟಿ ವರ್ಗದವರು ಪಡೆಯಬೇಕಾಗುತ್ತದೆ.
ಒಬಿಸಿ, ಇಡಬ್ಲ್ಯೂಎಸ್, ಜನರಲ್ ಕೆಟಗರಿಯ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ ಸಿ, ಎಸ್ ಟಿ, ಮಹಿಳೆಯರು, ಮಾಜಿ ಸೈನಿಕ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಶುಲ್ಕವನ್ನು ನೆಟ್ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 31 ಸಾವಿರ ರೂ.ನಿಂದ 92 ಸಾವಿರ ರೂ. ವೇತನ ನೀಡಲಾಗುತ್ತದೆ.