ಲಂಡನ್: ಭಾರತದ ಆಧಾರ್ ಕಾರ್ಡ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ಬ್ರಿಟನ್‌ನಲ್ಲೂ ಅದೇ ಮಾದರಿಯ ವ್ಯವಸ್ಥೆಯನ್ನು ಜಾರಿ ಮಾಡಲು ಅಲ್ಲಿನ ಪ್ರಧಾನಿ ಚಿಂತನೆ ನಡೆಸಿದ್ದಾದೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಭಾರತದ ಆಧಾರ್ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು “ಅದ್ಭುತ ಯಶಸ್ಸು” ಎಂದು ಶ್ಲಾಘಿಸಿದ್ದು. ಇದೇ ಮಾದರಿಯಲ್ಲಿ ಬ್ರಿಟನ್‌ನಲ್ಲೂ ‘ಬ್ರಿಟ್ ಕಾರ್ಡ್’ (Brit Card) ಎಂಬ ರಾಷ್ಟ್ರೀಯ ಡಿಜಿಟಲ್ ಗುರುತಿನ ಚೀಟಿ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಸ್ಟಾರ್ಮರ್, ಆಧಾರ್ ಪರಿಕಲ್ಪನೆಯ ರೂವಾರಿಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರನ್ನು ಭೇಟಿಯಾಗಿ ಭಾರತದ ಡಿಜಿಟಲ್ ಐಡಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದರು. ಭಾರತದಲ್ಲಿ ಸುಮಾರು 1.4 ಶತಕೋಟಿ ಜನರನ್ನು ಒಳಗೊಂಡಿರುವ ಆಧಾರ್ ವ್ಯವಸ್ಥೆಯು, ಬ್ಯಾಂಕಿಂಗ್ ಮತ್ತು ಕಲ್ಯಾಣ ಸೇವೆಗಳನ್ನು ಪಡೆಯಲು ಸಹಕಾರಿಯಾಗಿದೆ.
“ಬ್ರಿಟ್ ಕಾರ್ಡ್ ಮತ್ತು ಆಧಾರ್ ನಡುವಿನ ವ್ಯತ್ಯಾಸ”
ಆಧಾರ್ ವ್ಯವಸ್ಥೆಯು ಬಯೋಮೆಟ್ರಿಕ್ ಡೇಟಾವನ್ನು (ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್) ಬಳಸಿದರೆ, ಬ್ರಿಟ್ ಕಾರ್ಡ್ ಬಯೋಮೆಟ್ರಿಕ್ ಡೇಟಾವನ್ನು ಒಳಗೊಳ್ಳುವುದಿಲ್ಲ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.
ಆರಂಭಿಕ ಉದ್ದೇಶ: ಬ್ರಿಟ್ ಕಾರ್ಡ್‌ನ ಪ್ರಾಥಮಿಕ ಗುರಿ ಅಕ್ರಮ ಉದ್ಯೋಗವನ್ನು ತಡೆಯುವುದಾಗಿದೆ.
ಕಡ್ಡಾಯ ಬಳಕೆ: ಆರಂಭದಲ್ಲಿ, ಉದ್ಯೋಗಕ್ಕೆ ಸೇರುವವರಿಗೆ ಮಾತ್ರ ಬ್ರಿಟ್ ಕಾರ್ಡ್ ಕಡ್ಡಾಯವಾಗಿರುತ್ತದೆ. ದಿನನಿತ್ಯದ ಬಳಕೆಗೆ ಇದು ಕಡ್ಡಾಯವಲ್ಲ.
ಡೇಟಾ ಸಂಗ್ರಹ: ಬ್ರಿಟ್ ಕಾರ್ಡ್ ಡಿಜಿಟಲ್ ರೂಪದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಗ್ರಹವಾಗಲಿದ್ದು, ಬಳಕೆದಾರರ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
“ವಿರೋಧ ಮತ್ತು ಕಳವಳಗಳು”
ಈ ಯೋಜನೆಗೆ ಬ್ರಿಟನ್‌ನಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗಿತನದ ಉಲ್ಲಂಘನೆ, ಡೇಟಾ ಸೋರಿಕೆ ಮತ್ತು ಸರ್ಕಾರದ ನಿಗಾ ಹೆಚ್ಚಾಗುವ ಭೀತಿಗಳು ಇದಕ್ಕೆ ಕಾರಣವಾಗಿವೆ. ನಾಗರಿಕ ಹಕ್ಕುಗಳ ಕಾರ್ಯಕರ್ತರು ಈ ಯೋಜನೆಯು ವ್ಯಕ್ತಿಗಳ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸಬಹುದು ಎಂದು ವಾದಿಸಿದ್ದಾರೆ.
ಆದಾಗ್ಯೂ, ದೈನಂದಿನ ಜೀವನದಲ್ಲಿ ಗುರುತು ಪತ್ರಕ್ಕಾಗಿ ಅನೇಕ ದಾಖಲೆಗಳನ್ನು ಹುಡುಕುವ ಕಿರಿಕಿರಿಯನ್ನು ತಪ್ಪಿಸಲು ಡಿಜಿಟಲ್ ಐಡಿಗಳು ಅನುಕೂಲಕರವಾಗಿವೆ ಎಂದು ಸ್ಟಾರ್ಮರ್ ಸಮರ್ಥಿಸಿಕೊಂಡಿದ್ದಾರೆ. ಭಾರತದ ಆಧಾರ್ ಯಶಸ್ಸಿನಿಂದ ಪಾಠ ಕಲಿಯಬಹುದು ಎಂದು ಅವರು ಹೇಳಿದ್ದಾರೆ.
ಪ್ರಸ್ತುತ, ಈ ಯೋಜನೆಗೆ ಯಾವುದೇ ಖಾಸಗಿ ತಂತ್ರಜ್ಞಾನ ಪೂರೈಕೆದಾರರೊಂದಿಗೆ ಸರ್ಕಾರ ಪಾಲುದಾರಿಕೆ ಮಾಡಿಕೊಂಡಿಲ್ಲ. ಹೆಚ್ಚುತ್ತಿರುವ ವೆಚ್ಚ ಮತ್ತು ಖಾಸಗಿತನದ ಅಪಾಯಗಳ ಬಗ್ಗೆ ವಿರೋಧ ಪಕ್ಷಗಳು ಮತ್ತು ಕೆಲವು ಲೇಬರ್ ಪಕ್ಷದ ಸಂಸದರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.