ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸದಿದ್ದಕ್ಕೆ ಯುವತಿಯೋರ್ವಳು ತನ್ನ ಕುಟುಂಬದ 13 ಜನರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇರುವ ಖೈರ್ಪುರ ಜಿಲ್ಲೆಯ ಹೈಬತ್ ಖಾನ್ ಬ್ರೋಹಿ ಎಂಬಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಒಂದೇ ಕುಟುಂಬದ 13 ಜನ ಸಾವನ್ನಪ್ಪಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದ ಪೊಲೀಸರು ಆಘಾತಕಾರಿ ಅಂಶ ಹೊರ ಹಾಕಿದ್ದಾರೆ.
ಈ ಘಟನೆ ಆಗಸ್ಟ್ ನಲ್ಲಿ ನಡೆದಿತ್ತು. 13 ಜನರು ವಾಂತಿ, ಭೇದಿಯಿಂದ ನಿತ್ರಾಣರಾಗಿದ್ದರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವುದಕ್ಕೂ ಮುನ್ನವೇ ಅವರೆಲ್ಲ ಸಾವನ್ನಪ್ಪಿದ್ದರು. ಆದರೆ, ಮನೆಯಲ್ಲಿನ ಓರ್ವ ಯುವತಿ ಮಾತ್ರ ಆರೋಗ್ಯವಾಗಿದ್ದಳು.
ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಸಾವನ್ನಪ್ಪಿದ 13 ಜನರ ದೇಹದಲ್ಲಿ ವಿಷ ಪತ್ತೆಯಾಗಿತ್ತು. ಈ ವಿಷವನ್ನು ಆಹಾರದ ಮೂಲಕ ಸೇವಿಸಿರುವುದು ಕೂಡ ತನಿಖೆಯಿಂದ ಬಯಲಾಗಿತ್ತು. ಹೀಗಾಗಿ ಯುವತಿಯ ಮೇಲೆ ಸಂಶಯಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಯುವತಿ, ಗ್ರಾಮದಲ್ಲಿನ ಓರ್ವ ಯುವಕನನ್ನು ಪ್ರೀತಿಸಿರುವ ವಿಚಾರ ಹೇಳಿದ್ದಾಳೆ. ಆದರೆ, ಆತನೊಂದಿಗೆ ಮದುವೆ ಮಾಡಿಕೊಳ್ಳಲು ಕುಟುಂಬಸ್ಥರು ಒಪ್ಪಲಿಲ್ಲ. ಹೀಗಾಗಿ ಗೆಳೆಯನೊಂದಿಗೆ ಸೇರಿ ಮುಗಿಸಲು ಯತ್ನಿಸಿದೆ ಎಂದು ಯುವತಿ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.
ಗೆಳೆಯನ ಜೊತೆ ಸೇರಿ ಗೋಧಿ ಹಿಟ್ಟಿನಲ್ಲಿ ವಿಷ ಸೇರಿಸಿದ್ದಾಳೆ. ಆ ಹಿಟ್ಟಿನಲ್ಲೇ ರೋಟಿ ತಯಾರಿಸಿದ್ದ ಯುವತಿ, ಮನೆಯಲ್ಲಿದ್ದ ಎಲ್ಲರಿಗೂ ಊಟ ಬಡಿಸಿದ್ದಳು. ಮಗಳು ಮಾಡಿದ್ದ ಅಡುಗೆಯನ್ನು ಆಕೆಯ ಅಪ್ಪ – ಅಮ್ಮ ಸೇರಿದಂತೆ ಎಲ್ಲರೂ ಸೇವಿಸಿದ್ದರು. ಆನಂತರ ಅವರೆಲ್ಲ ಅಸ್ವಸ್ಥರಾಗಿ, ಸಾವನ್ನಪ್ಪಿದ್ದಾರೆ. ಸದ್ಯ ಯುವಕ ಹಾಗೂ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯ ಕೇಳಿ ಇಡೀ ಜಗತ್ತು ತಲ್ಲಣಗೊಂಡಿದೆ.