ಬೆಂಗಳೂರು | ಮನೆಯಲ್ಲಿ ಏಕಾಏಕಿ ಬೆಂಕಿ ಹಾಗೂ ದಟ್ಟವಾದ ಹೊಗೆ ತುಂಬಿಕೊಂಡು ಮಹಿಳೆ ಉಸಿರು ಗಟ್ಟಿ ಮೃತಪಟ್ಟಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಮೃತ ಮಹಿಳೆ.
ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ (ಜ.3) ಶನಿವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಜನವರಿ 3ರಂದು ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸವಿದ್ದ ರೂಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಶರ್ಮಿಳಾ ಮನೆ ಬಳಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಮನೆಯ ಡೋರ್ ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ರೂಮ್ ಹಾಗೂ ಹಾಲ್ನಲ್ಲಿ ಬೆಂಕಿ ಬಿದ್ದು ಹೊಗೆ ತುಂಬಿಕೊಂಡಿತ್ತು. ಮನೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮನೆ ಪರಿಶೀಲನೆ ವೇಳೆ ಶರ್ಮಿಳಾ ಪ್ರಜ್ಞೆ ತಪ್ಪಿ ಬಿದಿರೋದು ಕಂಡುಬಂದಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷೆ ನಡೆಸಿದ್ದ ವೈದ್ಯರು ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಬೆಂಕಿ ಬಿದ್ದ ಪರಿಣಾಮ ರೂಮ್ನಿಂದ ಹೊರ ಬರಲಾಗದೇ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರೋ ಶಂಕೆ ಇದೆ. ಆದರೂ ಪೊಲೀಸರು ತಮ್ಮದೇ ಆಯಾಮದಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೊಲೀಸ್ ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ. ಯಾಕೆಂದರೆ ಮನೆಯೊಳಗೆ ಹೇಗೆ ಬಿದ್ದಿದ್ದೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ.
ಮನೆಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವಾ ಬೆಡ್ ಲ್ಯಾಂಪ್, ಮೇಣದ ಬತ್ತಿಯಿಂದ ಬೆಂಕಿ ಹೊತ್ತಿಕೊಳ್ತಾ ಅನ್ನೋದ್ರ ಬಗ್ಗೆ ತನಿಖೆ ನಡೆಸಬೇಕಿದೆ. ಮನೆಯ ರೂಮ್ನಲ್ಲಿ ಬೆಡ್, ಕರ್ಟನ್ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ FSL ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಯಾವುದರಿಂದ ಬೆಂಕಿ ತಗುಲಿದೆ ಎಂದು ತಿಳಿಯಲು ಸೋಂಕೋ ತಂಡದ ವರದಿಗೆ ಕಾಯ್ತಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ | ಕಾರಣ ನಿಗೂಢ!



















