ಪುಣೆ: ಮದುವೆಯಾಗಲು ಒಪ್ಪದ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿ ನಡೆದಿದೆ.
22 ವರ್ಷದ ಯುವಕನೊಬ್ಬ ತನ್ನನ್ನು ಮದುವೆಯಾಗುವುದಿಲ್ಲ ಎಂದ 21 ವರ್ಷದ ಯುವತಿಯ ಕತ್ತು ಸೀಳಿ, ಆಕೆಯ ಹೊಟ್ಟೆಗೆ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಭೀಕರ ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನನಗೆ ಸಿಗದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 21 ವರ್ಷದ ಪ್ರಾಚಿ ಮಾನೆ ಹತ್ಯೆಗೆ ಸಂಬಂಧಿಸಿದಂತೆ ಅವಿರಾಜ್ ಖಾರತ್ ಎಂಬಾತನನ್ನು ಪೊಲೀಸಲು ಬಂಧಿಸಿದ್ದಾರೆ. ಪಿಂಪ್ರಿ ಚಿಂಚ್ ವಾಡ್ ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಖಾರತ್ ನ ಮದುವೆ ಪ್ರಸ್ತಾಪ ನಿರಾಕರಿಸಿದ್ದರು. ಹೀಗಾಗಿ ಕೋಪದಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಯುವತಿ ಮತ್ತು ಯುವಕ ಇಬ್ಬರೂ ಸಾಂಗ್ಲಿಯವರಾಗಿದ್ದು, ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ನಲ್ಲಿ ಸಹಪಾಠಿಗಳಾಗಿದ್ದರು ಎನ್ನಲಾಗಿದೆ. ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಖಾರತ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.