ವಾರಂಗಲ್: ನೇಣು ಹಾಕಿಕೊಂಡು ಸಾವಿಗೆ ಶರಣಾಗುವ ವಿಡಿಯೋ ಮಾಡಲು ಹೋಗಿ ಯುವಕ ನಿಜವಾಗಿಯೂ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ಸ್ಟಾಗ್ರಾಮ್ ಇನ್ಪ್ಲುಯೆನ್ಸರ್ ಓರ್ವ ಆಕಸ್ಮಿಕವಾಗಿ ಸತ್ತಿದ್ದಾನೆ. ನೇಣು ಕುಣಿಕೆ ಕತ್ತಿಗೆ ಬಿಗಿದು ರೀಲ್ಸ್ ಮಾಡುತ್ತಿದ್ದಾಗ ನಿಜವಾಗಿಯೂ ಸತ್ತು ಹೋಗಿದ್ದಾನೆ. ಈ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಈತ ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. 23 ವರ್ಷದ ಕಂಡಕಟ್ಲ ಅಜಯ್ ಸ್ಥಳೀಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಅಜಯ್ ತನ್ನ ಮೊಬೈಲ್ ಫೋನ್ ಅನ್ನು ಫ್ರಿಡ್ಜ್ ಮೇಲೆ ಇಟ್ಟು ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದ್ದಾನೆ. ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟನೆ ಮಾಡಲು ಮುಂದಾಗಿದ್ದಾನೆ. ಹೀಗಾಗಿ ತನ್ನ ಕತ್ತಿಗೆ ನೇಣು ಕುಣಿಕೆ ಹಾಕಿಕೊಂಡಿದ್ದು, ವೀಡಿಯೋ ಚಿತ್ರೀಕರಣ ವೇಳೆ ಇದು ಬಿಗಿಯಾಗಿದ್ದರಿಂದ ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದಾನೆ. ರಾತ್ರಿ ಆಗಿದ್ದರಿಂದಾಗಿ ಯಾರ ಗಮನಕ್ಕೂ ಇದು ಬಂದಿಲ್ಲ. ಬೆಳಿಗ್ಗೆ ಕುಟುಂಬಸ್ಥರು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಆದರೆ, ತಾಯಿ ಮಾತ್ರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
