ಬೆಂಗಳೂರು: ಜೊತೆಗಿದ್ದವರೆ ಬೆನ್ನಿಗೆ ಚೂರಿ ಹಾಕ್ತಾರೆ ಎಂಬ ಮಾತು ಆಗಾಗ ಸತ್ಯ ಅನಿಸುತ್ತಿರುತ್ತದೆ. ಇಲ್ಲೊಂದು ಘಟನೆ ನೋಡಿದರೆ, ಅದು ಖಂಡಿತ ಸತ್ಯ ಅನ್ನಲೇಬೇಕು ಅನ್ನುವಂತಾಗಿದೆ.
ಯುವಕನೊಬ್ಬ ಕಾಲೇಜು ಯುವತಿಯ ಜೊತೆ ಸ್ನೇಹ ಬೆಳೆಸಿ ಆಪ್ತನಾಗಿ ಅವಳ ಸೀಕ್ರೆಟ್ ಗಳನ್ನು ತಿಳಿದುಕೊಂಡು ನಂತರ ಬ್ಲಾಕ್ ಮೇಲ್ ಮಾಡಿ ಚಿನ್ನ, ಹಣ ವಸೂಲಿ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ತೇಜಸ್ (19) ಬಂಧಿತ ಆರೋಪಿ. ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆರೋಪಿ ತೇಜಸ್ ಮೊದ ಮೊದಲು ಒಳ್ಳೆಯವನಂತೆ ನಟಿಸಿ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗುತ್ತಿದ್ದ. ಆನಂತರ ಯುವತಿಯ ಸೀಕ್ರೆಟ್ ತಿಳಿದುಕೊಂಡಿದ್ದಾನೆ. ಯುವತಿಯು ತನ್ನ ಸ್ನೇಹಿತನ ಜೊತೆ ಇರುವ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಸ್ನೇಹಿತನ ಜೊತೆಗಿನ ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಹೀಗೆ ಹೆದರಿಸಿ ಹಣ, ಚಿನ್ನ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಅಲ್ಲದೆ ಕಾಲೇಜು ಹಾಗೂ ಮನೆ ಬಳಿ ಬಂದು ಯುವತಿಯನ್ನು ಹೆದರಿಸಿದ್ದಾನೆ. ಇದರಿಂದ ಹೆದರಿದ್ದ ಯುವತಿ ಮನೆಯಲ್ಲಿದ್ದ ಚಿನ್ನ ತಂದು ತೇಜಸ್ ಗೆ ನೀಡಿದ್ದಾಳೆ. ಹಂತ ಹಂತವಾಗಿ ಆರೋಪಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾನೆ. ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿದ್ದು, ತಾಯಿಗೆ ಗೊತ್ತಾಗಿದೆ. ಆಗ ಮಗಳನ್ನು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ತಾಯಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.