ಪಾಟ್ನಾ: ಆನ್ ಲೈನ್ ಗೇಮ್ ಆಡಲು ಕುಟುಂಬಸ್ಥರು ಬಿಡದಿದ್ದಕ್ಕೆ ಯುವಕನೊಬ್ಬ ಬಂಚ್ ಗಟ್ಟಲೇ ಬೀಗದ ಕೀ, ಚಾಕು ಹಾಗೂ ಎರಡು ಉಗುರು ಕತ್ತರಿಸುವ ಉಪಕರಣ ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.
ವೈದ್ಯರು ಕೂಡಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಆತನ ಜೀವ ಉಳಿಸಿದ್ದಾರೆ. ಈ ಘಟನೆ ಬಿಹಾರದ ಮೋತಿಹಾರಿಯಲ್ಲಿ ಈ ಘಟನೆ ನಡೆದಿದೆ. ಯುವಕನಿಗೆ ಕುಟುಂಬಸ್ಥರು ಮಲ್ಟಿಪ್ಲೇಯರ್ ಗೇಮ್ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾವನ್ನು ಆಡುವುದಕ್ಕೆ ನಿರ್ಬಂಧಿಸಿದ್ದರು. ಇದರಿಂದ ಕುಪಿತಗೊಂಡ ಆತ ಮನೆಯಲ್ಲಿದ್ದ ಹಲವು ಬೀಗದ ಕೀ, ಎರಡು ನೈಲ್ ಕಟ್ಟರ್ ಹಾಗೂ ಒಂದು ಚಾಕುವನ್ನು ನುಂಗಿದ್ದ.
ಆನಂತರ ಆತನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನ ನಂತರ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಕೂಡಲೇ ಕುಟುಂಬದವರು ಈತನನ್ನು ಚಂಪರಣ್ ಜಿಲ್ಲೆಯ ಮೋತಿಹಾರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಚಾಕು, ನೈಲ್ ಕಟ್ಟರ್ ಹಾಗೂ ಕೀಗಳು ಕಾಣಿಸಿಕೊಂಡಿವೆ.
ಆತನಿಗೆ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆದಿದ್ದಾಗಿ ವೈದ್ಯರು ಹೇಳಿದ್ದಾರೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.