ಶಿವಮೊಗ್ಗ: ಯುವಕನೊಬ್ಬ ಆನ್ ಲೈನ್ ನಲ್ಲಿ ಹಣ ಡಬಲ್ ಮಾಡಲು ಹೋಗಿ ಈಗ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ, ಡಬಲ್ ಆಗುತ್ತದೆಂದು ಆಸೆ ಪಟ್ಟು ಮೋಸ ಹೋದ ಯುವಕ ಈಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ಭದ್ರಾವತಿ ನಗರದ ಕಾಗದ ನಗರ ಬಡಾವಣೆಯ 6ನೇ ವಾರ್ಡ್ ನಲ್ಲಿ ನಡೆದಿದೆ. ಒನ್ ಟು ಡಬಲ್ ಆಗುತ್ತದೆಂದು ನಂಬಿ ಯುವಕ ಆನ್ ಲೈನ್ ನಲ್ಲಿ 91 ಸಾವಿರ ರೂ.ಗಳನ್ನು ಹೂಡಿಕೆ ಮಾಡಿದ್ದ. ಆದರೆ, ಆತನಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಮೋಸ ಹೋಗುತ್ತಿದ್ದಂತೆ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರದೀಪ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಖಾಸಗಿ ಕಂಪನಿಯಲ್ಲಿ ಪ್ರದೀಪ್ ಕೆಲಸ ಮಾಡುತ್ತಿದ್ದ. ಸಾಲ ಮಾಡಿ ಆನ್ ಲೈನ್ ಆ್ಯಪ್ ಮೂಲಕ ಯುವಕ ಹಣ ಹೂಡಿಕೆ ಮಾಡಿದ್ದ. ಮೋಸ ಹೋಗಿದ್ದರಿಂದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.