ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 23 ವರ್ಷದ ಯುವಕನೊಬ್ಬ ತನ್ನ ಗೆಳೆಯನನ್ನೇ ಕೊಲೆ ಮಾಡಿದ್ದಾನೆ. ಗೆಳೆಯನ ಸಹೋದರಿಯು ಬ್ರೇಕಪ್ ಮಾಡಿಕೊಂಡ ಸಿಟ್ಟಿನಲ್ಲಿ ಆತನ ಮನೆಗೆ ಹೋದ ಯುವಕನು ಗೆಳೆಯನನ್ನೇ ಹತ್ಯೆ ಮಾಡಿದ್ದಾನೆ. ತೇಜಸ್ ರಾಜ್ ಎಂಬ 23 ವರ್ಷದ ಯುವಕನು 21 ವರ್ಷದ ಫೆಬಿನ್ ಜಾರ್ಜ್ ಎಂಬಾತನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಬಳಿಕ ಫೆಬಿನ್ ತಂದೆ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲ್ಲಂ ನಗರದ ಉಳಿಯಕೋವಿ ಎಂಬ ಪ್ರದೇಶದಲ್ಲಿರುವ ಫೆಬಿನ್ ಜಾರ್ಜ್ ಮನೆಗೆ ಸೋಮವಾರ ಸಂಜೆ ತೇಜಸ್ ರಾಜ್ ತೆರಳಿದ್ದಾನೆ. ಮನೆಯಲ್ಲಿ ಎಷ್ಟು ಹುಡುಕಿದರೂ ತನ್ನ ಗೆಳತಿ ಸಿಗದ ಕಾರಣ ಆತ ಕುಪಿತಗೊಂಡಿದ್ದಾನೆ. ಇದೇ ವೇಳೆ ಗೆಳೆಯ ಫೆಬಿನ್ ಜಾರ್ಜ್ ಗೆ ಚಾಕು ಇರಿದಿದ್ದಾನೆ. ಜಗಳ ಬಿಡಿಸಲು ಅಡ್ಡ ಬಂದ ಫೆಬಿನ್ ತಂದೆಯ ಮೇಲೂ ತೇಜಸ್ ರಾಜ್ ಹಲ್ಲೆ ನಡೆಸಿದ್ದಾನೆ. ರಸ್ತೆ ಮೇಲೆ ಬಿದ್ದಿದ್ದ ಫೆಬಿನ್ ಗೆ ಸತತವಾಗಿ ಚಾಕು ಇರಿದಿದ್ದಾನೆ. ಬಳಿಕ ಫೆಬಿನ್ ಮೃತಪಟ್ಟಿದ್ದಾನೆ. ಸದ್ಯ, ಫೆಬಿನ್ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೆ ಬ್ರೇಕಪ್ ಕಾರಣ?
ಫೆಬಿಜ್ ಜಾರ್ಜ್ ಸಹೋದರಿ ಹಾಗೂ ತೇಜಸ್ ರಾಜ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಫೆಬಿನ್ ಹಾಗೂ ತೇಜಸ್ ಬಾಲ್ಯದ ಸ್ನೇಹಿತರಾದ ಕಾರಣ ಫೆಬಿನ್ ಮನೆಗೆ ಆಗಾಗ ತೇಜಸ್ ಬರುತ್ತಿದ್ದ. ಇದರಿಂದಾಗಿ ಫೆಬಿನ್ ಸಹೋದರಿ ಹಾಗೂ ತೇಜಸ್ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಫೆಬಿನ್ ಸಹೋದರಿಯು ತೇಜಸ್ ಜತೆ ಬ್ರೇಕಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಫೆಬಿನ್ ಸಹೋದರಿ ಮೇಲೆ ತೇಜಸ್ ಗೆ ಕೋಪ ಬಂದಿತ್ತು. ಅಲ್ಲದೆ, ಫೆಬಿನ್ ಕಾರಣದಿಂದಾಗಿಯೇ ಪ್ರೇಯಸಿ ಬ್ರೇಕಪ್ ಮಾಡಿಕೊಂಡಿದ್ದಾಳೆ ಎಂದು ತೇಜಸ್ ಭಾವಿಸಿದ್ದಾನೆ. ಇದೇ ಕಾರಣಕ್ಕೆ ಪೆಟ್ರೋಲ್ ಹಾಗೂ ಚಾಕು ಹಿಡಿದುಕೊಂಡು ಹೋಗಿ ಫೆಬಿನ್ ಮೇಲೆ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.