ಉಡುಪಿ : ಓಮನ್ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಶಾಂತನು ಶೆಟ್ಟಿಗಾರ್ ಅಬುದಾಭಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ (UAE’s Big Ticket lucky draw) ಬರೋಬ್ಬರಿ 49 ಕೋಟಿ (20 ಮಿಲಿಯನ್ ದಿರಮ್) ರೂ. ಮೊತ್ತದ ಲಾಟರಿ ಗೆದ್ದಿದ್ದಾರೆ.
ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಾಂತನು ಓಮನ್ನಲ್ಲಿ ರಿಟೇಲ್ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್ ಟಿಕೆಟ್ ರಾಫಲ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಾಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.
ಶಾಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಸೇರಿಕೊಂಡು ಜಂಟಿಯಾಗಿ ಈ ಲಾಟರಿ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂ.ನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಶಾಂತನು ಹೇಳಿಕೊಂಡಿದ್ದಾರೆ. ಇನ್ನು, ಶಾಂತನು ಲಾಟರಿಯಲ್ಲಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಾಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಡ್ರಾ ಫಲಿತಾಂಶ ನೇರ ಪ್ರಸಾರವಾಗಿದ್ದು, ಕಾರ್ಯಕ್ರಮ ಆಯೋಜಕರೊಂದಿಗೆ ಶಾಂತನು ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್ ಟಿಕೆಟ್ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದ್ದು, ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹರ್ಷಿಸಿದ್ದಾರೆ.
1992ರಲ್ಲಿ ಯುಎಇನಲ್ಲಿ ಬಿಗ್ ಟಿಕೆಟ್ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರು.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರು.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ.
ಇದನ್ನೂ ಓದಿ : ಒನ್‌ಪ್ಲಸ್ ನಾರ್ಡ್ 6 ಬಿಡುಗಡೆಗೆ ಮುಹೂರ್ತ ಫಿಕ್ಸ್? ಬೆಲೆ, ಫೀಚರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ!



















