ಹೊಳೆಹೊನ್ನೂರು : ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆನವೇರಿಯಲ್ಲಿ ತಗಡಿನ ಶೆಡ್ ನಿಮಾರ್ಣದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹನುಮಂತಾಪುರದ ರಕ್ಷಿತ್ (22) ಸಾವನ್ನಪ್ಪಿದ ದುರ್ದೈವಿ. ಹನುಮಂತಾಪುರದ ರಕ್ಷಿತ್ ಆನವೇರಿಯ ಕೆಕೆ ರಸ್ತೆಯಲ್ಲಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರೀ ಹೋಟೆಲ್ ಶೆಡ್ ನಿರ್ಮಾಸಿದ್ದಾನೆ.
ಶೆಡ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿರಾವ್ ದಂಪತಿಯ ಒಬ್ಬನೆ ಮಗ ರಕ್ಷಿತ್, ಚಿಕ್ಕಪ್ಪನ ಮಗನ ಸಹಭಾಗಿತ್ವದಲ್ಲಿ ಮಿಲ್ಟ್ರೀ ಹೋಟೆಲ್ ನಿರ್ಮಾಣದ ಕನಸು ಕಂಡಿದು ಆನವೇರಿಯಲ್ಲಿ ಖಾಲಿ ಜಾಗವೊಂದನ್ನು ಗುತ್ತಿಗೆ ಪಡೆದು ತಗಡಿನ ಶೆಡ್ ನಿರ್ಮಾಣ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ, ಕನಸಿನ ಭವಿಷ್ಯ ಕಟ್ಟಿಕೊಳ್ಳಬೇಕಾದ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.