ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಕುಂಬ್ರದ ಒಳಮೊಗ್ರು ಹತ್ತಿರದ ಕಾಡಿನಲ್ಲಿ ಮಹಿಳೆಯ (Woman) ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಮಹಿಳೆಯ ತಲೆಗೂದಲು ನೇಣುಕುಣಿಕೆಯಲ್ಲಿ ಜೋತಾಡುತ್ತಿದ್ದು, ನೇಣುಬಿಗಿದುಕೊಂಡು ಆತ್ಮಹತ್ಯೆಯ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ನಳಿನಿ ಸಾವನ್ನಪ್ಪಿರುವ ಮಹಿಳೆ ಎನ್ನಲಾಗಿದೆ. ನಳಿನಿ ಉರ್ವ ನಿವಾಸಿ ಸಂಜೀವ ಎಂಬುವವರನ್ನು ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು. ತನ್ನ ತಾಯಿಯ ಮನೆಗೆ ಹೋಗಿ ಬರುವುದಾಗಿ ಹೋದವರು ಮರಳಿ ಬಂದಿರಲಿಲ್ಲ.
ನಳಿನಿ ಕಳೆದ ಒಂದು ತಿಂಗಳಿಂದ ಮನೆಯಿಂದ ನಾಪತ್ತೆಯಾಗಿದ್ದರು. ಪತ್ನಿ ನಾಪತ್ತೆ ಕುರಿತು ಸಂಜೀವ ಅಕ್ಟೋಬರ್ 8ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಮನೆಯ ಎದುರಿಗೆ ಇರುವ ಗುಡ್ಡದ ತುದಿಯಲ್ಲಿ ನಿಳಿನಿ ಮೃತದೇಹ ಪತ್ತೆಯಾಗಿದೆ.