ಬೆಂಗಳೂರು: ಸಂಬಂಧಿಕರ ಮನೆಗೆ ಸ್ನಾನಕ್ಕೆ ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ.
ಲಕ್ಷ್ಮೀ (25) ಸಾವನ್ನಪ್ಪಿರುವ ಮಹಿಳೆ. ಸಾವನ್ನಪ್ಪಿರುವ ಲಕ್ಷ್ಮೀ ತಿರುಪತಿಯಿಂದ ಅಡೇಪೇಟೆಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಸ್ನಾನಕ್ಕೆಂದು ಬಾತ್ ರೂಮ್ ಗೆ ಹೋಗಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಅಡೇಪೇಟೆಯಲ್ಲಿನ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ಪತಿ ಜೊತೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖದ ಮೇಲೆ ಏನೂ ಆಗಿರಲಿಲ್ಲ. ಯಾವುದೇ ಗಾಯದ ಗುರುತುಗಳೂ ಇರಲಿಲ್ಲ. ಆದರೆ, ಸ್ನಾನಕ್ಕೆ ಹೋದ ಕೆಲವೇ ನಿಮಿಷಗಳಲ್ಲಿ ಸಾವನ್ಪಪಿದ್ದು, ಮುಖದಲ್ಲಿ ಪರಚಿರುವ ಗಾಯಗಳಾಗಿರುವುದು ಕಂಡು ಬಂದಿದೆ. ಮನೆಗೆ ಹೊರಗಿನಿಂದ ಯಾರೂ ಬಂದಿರಲಿಲ್ಲ.
ಗ್ಯಾಸ್ ಗೀಸರ್ ಕೂಡ ಆನ್ ಆಗಿರಲಿಲ್ಲ. ಬಕೆಟ್ ನಲ್ಲಿ ನೀರು ಸಹ ತುಂಬಿಸಿರಲಿಲ್ಲ. ಆದರೂ ಮಹಿಳೆ ಬೆತ್ತಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.