ಲಖನೌ: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಆಧುನಿಕ ಕಾಲದಲ್ಲಿ ಕೆಲವೊಂದು ಮದುವೆಗಳು ಭೂಲೋಕದಲ್ಲೇ ನರಕಸದೃಶವಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮದುವೆಯಾದ ಕೇವಲ ಎರಡು ವಾರಗಳಲ್ಲಿಯೇ ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಡಿಸಿದ್ದಾಳೆ. ಪ್ರಿಯತಮನ ಜತೆಗೂಡಿ ಪತಿಯನ್ನೇ ಕೊಲೆ ಮಾಡಲು ಸುಪಾರಿ ಕೊಟ್ಟ ಪ್ರಕರಣ ಈಗ ಬಯಲಾಗಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಇಂತಹದ್ದೊಂದು ಪ್ರಕರಣ ಬಯಲಾಗಿದೆ. ಮಾರ್ಚ್ 5ರಂದು ದಿಲೀಪ್ ಹಾಗೂ ಪ್ರಗತಿ ಯಾದವ್ ಮದುವೆಯಾಗಿದ್ದಾರೆ. ಆದರೆ, ಪ್ರಗತಿ ಯಾದವ್ ಹಾಗೂ ಅನುರಾಗ್ ಯಾದವ್ ಅವರು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪ್ರಗತಿ ಯಾದವ್ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿರಲಿಲ್ಲ. ಹಾಗಾಗಿ, ಬಲವಂತದಿಂದ ದಿಲೀಪ್ ಜತೆ ಮದುವೆ ಮಾಡಿಸಿದ್ದಾರೆ. ಇದಾದ ಬಳಿಕ 22 ವರ್ಷದ ಪ್ರಗತಿ ಯಾದವ್, ಪ್ರಿಯತಮನ ಜತೆಗೂಡಿ ಗಂಡನ ಕೊಲೆಗೆ ಸುಪಾರಿ ಕೊಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರ್ಚ್ 19ರಂದು 25 ವರ್ಷದ ವ್ಯಕ್ತಿಯೊಬ್ಬರು ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವಿಚಾರಿಸಿ ನೋಡಿದಾಗ ಗಾಯಗೊಂಡ ವ್ಯಕ್ತಿಯು ದಿಲೀಪ್ ಎಂಬುದು ಗೊತ್ತಾಗಿದೆ. ಇದಾದ ನಂತರ ದಿಲೀಪ್ ಸಹೋದರ ಸಾಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ ಬಳಿಕ ಸುಪಾರಿ ಕೊಟ್ಟಿದ್ದು ಯಾರು ಎಂಬುದು ಬಯಲಾಗಿದೆ.
ಪೊಲೀಸರು ತನಿಖೆ ನಡೆಸಿದ ಬಳಿಕ ಪ್ರಗತಿ ಯಾದವ್ ಹಾಗೂ ಅನುರಾಗ್ ಯಾದವ್ ಅವರೇ ದಿಲೀಪ್ ಹತ್ಯೆಗೆ ಸಂಚು ರೂಪಿಸಿದ್ದಾರೆ. ಅಲ್ಲದೆ, ರಾಮ್ ಜಿ ಚೌಧರಿ ಎಂಬ ಸುಪಾರಿ ಕಿಲ್ಲರ್ ಗೆ 2 ಲಕ್ಷ ರೂಪಾಯಿ ಕೊಟ್ಟು, ದಿಲೀಪ್ ಅವರನ್ನು ಕೊಲೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈಗ ದಿಲೀಪ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸದ್ಯ, ಪ್ರಗತಿ ಹಾಗೂ ಅನುರಾಗ್ ನನ್ನು ಪೊಲೀಸರು ಬಂಧಿಸಿದ್ದಾರೆ.