ಪ್ಯಾರಿಸ್: ಒಲಿಂಪಿಕ್ಸ್-2024ರ (Paris Olympics) ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಜುಲೈ 26 ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಅದ್ಧೂರಿ ಕ್ರೀಡಾ ಉತ್ಸವಕ್ಕೆ ಪ್ಯಾರಿಸ್ ಸಹ ಸಜ್ಜಾಗಿದೆ. ಈ ಸಂದರ್ಭದಲ್ಲಿಯೇ ಕ್ರೀಡಾಭಿಮಾನಿಗಳನ್ನು (Sports Fans) ಬೆಚ್ಚಿ ಬೀಳಿಸಿದೆ. ಒಲಿಂಪಿಕ್ಸ್ ಕ್ರೀಡಾಕೂಟ ವೀಕ್ಷಣೆಗೆಂದು ಬಂದಿದ್ದ ಆಸ್ಟ್ರೇಲಿಯಾ ಮೂಲದ 25 ವರ್ಷದ ಮಹಿಳೆಯ (Australian Woman) ಮೇಲೆ ಐವರು ಕಾಮುಕರು ಗ್ಯಾಂಗ್ ರೇಪ್ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಲಿನ್ ರೋಗ್ ಕ್ಯಾಬರ್ಟ್‌ನ ಪಬ್ ವೊಂದರಲ್ಲಿ ಮದ್ಯ ಸೇವಿಸಿ, ಹೊರ ಬಂದ ಸಂದರ್ಭದಲ್ಲಿ ಐವರು ಕಾಮುಕರ ಗ್ಯಾಂಗ್ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಫ್ರಾನ್ಸ್ನಲ್ಲಿ ಮಹಿಳೆಯರಿಗೆ ಸರಿಯಾದ ಸುರಕ್ಷತೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸಂತ್ರಸ್ತ ಮಹಿಳೆ ಹರಿದ ಬಟ್ಟೆಯಲ್ಲಿದ್ದು, ಸ್ಥಳೀಯರ ರಕ್ಷಣೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಅನೇಕ ಕ್ರೀಡಾಭಿಮಾನಿಗಳೂ ಆತಂಕಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟಕ್ಕೆ ಈಗಾಗಲೇ ಹಮಾಸ್ ಉಗ್ರರು ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಮಹಿಳೆಯ ತಲೆ ಕತ್ತರಿಸಿದ ಭಯಾನಕ ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಪ್ಯಾರಿಸ್ ಒಲಿಂಪಿಕ್ಸ್ ಕೂಟಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಫ್ರಾನ್ಸ್ ಜೊತೆಗೆ ಭಾರತದ ಯೋಧರೂ ಭದ್ರತೆಗೆ ಕೈಜೋಡಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಹೇಳಿದೆ.