ಮದುವೆ ವಯಸ್ಸು ಮೀರಿದರೂ ವಧು ಸಿಗದ ವರಗಳನ್ನೇ ಟಾರ್ಗೆಟ್ ಮಾಡಿ ಟೋಪಿ ಹಾಕುತ್ತಿದ್ದ ಐನಾತಿ ಗ್ಯಾಂಗನ್ನ ರಾಜಸ್ತಾನ ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಈ ಗ್ಯಾಂಗ್ ವಧು ಸಿಗದವರಿಗೆ ವಾಟ್ಸಾಪ್ ಮೂಲಕ ಗಾಳ ಬೀಸಿತ್ತು. ಹೀಗೆ ಬಲೆ ಬೀಸುತ್ತಿದ್ದ ತಂಡ ಕೇವಲ 7 ತಿಂಗಳಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 27 ವರಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.
ವಧು ಅನ್ವೇಷಣೆಯಲ್ಲಿದ್ದವರನ್ನು ತಮ್ಮ ಚಕ್ರವ್ಯೂಹದಲ್ಲಿ ಸಿಲುಕಿಸುತ್ತಿದ್ದ ತಂಡ ವರಗಳಿಂದ 2ರಿಂದ 5 ಲಕ್ಷ ಪೀಕುತ್ತಿದ್ದರು. ಈ ಗ್ಯಾಂಗ್ ನ ವಧುವಾಗಿ ಅನುರಾಧ ಪಾಸ್ಮಾನ್ ಳನ್ನ ಪೀಳ್ಡಿಗಿಳಿಸಲಾಗುತ್ತಿತ್ತು. ಅನುರಾಧಳನ್ನೇ ತಾವು ಹಣ ವಸೂಲಿ ಮಾಡಿದ ವರನೊಟ್ಟಿಗೆ ಕಾನೂನಾತ್ಮಕವಾಗೇ ಮದುವೆ ಮಾಡಿಸಲಾಗ್ತಿತ್ತು. ಮೂರ್ನಾಲ್ಕು ದಿನ ವರನೊಟ್ಟಿಗಿರುತ್ತಿದ್ದ ಅನುರಾಧಾ, ರಾತ್ರೋ ರಾತ್ರಿ ಮನೆಯಲ್ಲಿದ್ದ ಚಿನ್ನ, ಹಣವನ್ನೆಲ್ಲಾ ದೋಚಿ ಎಸ್ಕೇಪ್ ಆಗುತ್ತಿದ್ದಳು. ಹೀಗೆ ರಾಜಸ್ಥಾನ, ಉತ್ತರ ಪ್ರದೇಶ, ಮೇಘಾಲಯ ಸೇರಿ ದೇಶದ 7ಕ್ಕೂ ಹೆಚ್ಚು ರಾಜ್ಯಗಳಲ್ಲಿ 27 ಮಂದಿಯನ್ನು ವಂಚಿಸಿರುವುದು ಖಾಕಿ ತನಿಖೆಯಲ್ಲಿ ಬಯಲಾಗಿದೆ. ಇದೀಗ ಅನುರಾಧ ಸೇರಿದಂತೆ ತಂಡದ ಐವರನ್ನು ರಾಜಸ್ತಾನ ಪೊಲೀಸರು ಬಂಧಿಸಿದ್ದು, ಈ ಮದುವೆ ಕಳ್ಳಾಟವಾಡಿ ವಂಚಿಸುತ್ತಿದ್ದ ಗ್ಯಾಂಗಿಗೆ ಹೆಡೆಮುರಿ ಕಟ್ಟಲಾಗಿದೆ.



















