ಬೆಂಗಳೂರು: ಪತ್ನಿಯು ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗಲೇ ಪತಿ ನೋಡಿ, ಹಲ್ಲೆ ಮಾಡಲು ಮುಂದಾದಾಗ ಆತನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಪ್ರಿಯತಮ ಹಾಗೂ ಪತ್ನಿ ಸೇರಿಕೊಂಡು ಪತಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸರು ಪ್ರೇಮಿಗಳಿಬ್ಬರನ್ನೂ ಬಂಧಿಸಿದ್ದಾರೆ. ಸಿಲಿಕಾನ್ ಸಿಟಿಯ ಹಗದೂರು ನಿವಾಸಿ ತೇಜಸ್ವಿನಿ(28) ಹಾಗೂ ಪ್ರಿಯಕರ ಗಜೇಂದ್ರ (36) ಬಂಧಿತ ಆರೋಪಿಗಳು. ಈ ಘಟನೆ ಆ. 9ರಂದು ನಡೆದಿದೆ. ಮಹೇಶ್ (36) ಕೊಲೆಯಾಗಿರುವ ದುರ್ದೈವಿ.
ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿ ಬದುಕು ಅರಸಿ ಬೆಂಗಳೂರಿಗೆ ಬಂದಿದ್ದರು. ವೈಟ್ ಫೀಲ್ಡ್ ನ ಹಗದೂರಿನ ಬಾಡಿಗೆ ಮನೆಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಮಹೇಶ್ ಆಟೋ ಚಾಲಕನಾಗಿದ್ದರೆ, ಪತ್ನಿ ತೇಜಸ್ವಿನಿ ಖಾಸಗಿ ಫೈನಾನ್ಸ್ ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇನ್ನೊಂದೆಡೆ ತೇಜಸ್ವಿನಿ ತಾನು ಕೆಲಸ ಮಾಡುತ್ತಿದ್ದ ಫೈನಾನ್ಸ್ ಕಂಪನಿಯಲ್ಲಿ ಗಜೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಹಂದಿದ್ದಳು ಎಂದು ತಿಳಿದು ಬಂದಿದೆ.
ಇದು ಕೂಡ ಪತಿಗೆ ಗೊತ್ತಾಗಿ, ಬೈದು ಬುದ್ಧಿ ಹೇಳಿದ್ದರು. ಆದರೆ, ಆ.9ರ ಬೆಳಗ್ಗೆ ಮಹೇಶ್ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ತೇಜಸ್ವಿನಿ ತನ್ನ ಪ್ರಿಯಕರ ಗಜೇಂದ್ರನನ್ನು ಮನೆಗೆ ಕರೆಯಿಸಿಕೊಂಡಿದ್ದಾಳೆ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ, ಇಬ್ಬರನ್ನೂ ಕಂಡು ಆಕ್ರೋಶಗೊಂಡು ಇಬ್ಬರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ತೇಜಸ್ವಿನಿ ಹಾಗೂ ಗಜೇಂದ್ರ ಸೇರಿ ಮಹೇಶ್‌ನ ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಇಬ್ಬರನ್ನೂ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.