ಬೆಂಗಳೂರು: ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವೆಂದು ಪರಿಗಣಿಸಲಾಗಿದ್ದ ಈ ಪ್ರಕರಣ, ಪೊಲೀಸರ ತನಿಖೆ ವೇಳೆ ಕೊಲೆಯೆಂದು ದೃಢಪಟ್ಟಿದೆ.
ಶರ್ಮಿಳಾ ಕೊಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, 18 ವರ್ಷದ ಯುವಕ ಕರ್ಣಲ್ ಕುರೈ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಸುಬ್ರಮಣ್ಯ ಲೇಔಟ್‌ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ, ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ.
ಜನವರಿ 3ರಂದು ರಾತ್ರಿ 9 ಗಂಟೆಗೆ ಶರ್ಮಿಳಾರ ಮನೆಗೆ ಕರ್ಣಲ್ ನುಗ್ಗಿದ್ದಾನೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಆತ ಏಕಾಏಕಿ ಶರ್ಮಿಳಾಳನ್ನು ತಬ್ಬಿ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, ಆತನನ್ನು ತಳ್ಳಿ ದೂರ ಸರಿಯಲು ಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ, ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಯಾರಿಗೂ ಅನುಮಾನ ಬಾರದಂತೆ, ಕೊಲೆ ಮರೆಮಾಚುವ ಉದ್ದೇಶದಿಂದ ಮೃತ ಶರ್ಮಿಳಾ ಮಲಗಿದ್ದ ಬೆಡ್‌ರೂಂಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಮೂಲದ ಶರ್ಮಿಳಾ, ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್‌ನಲ್ಲಿ ವಾಸವಾಗಿದ್ದರು. ಅವರು ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.



















