ನವದೆಹಲಿ: ಬರೋಬ್ಬರಿ 18 ವರ್ಷಗಳಿಂದ ದೂರ ಇದ್ದ ಅಣ್ಣ-ತಂಗಿಯನ್ನು ಇನ್ಸ್ಟಾದಿಂದ ಒಂದಾಗಿರುವ ಘಟನೆ ನಡೆದಿದೆ.
ಕಾನ್ಪುರದ ಮಹಿಳೆಯೊಬ್ಬರು ಕಳೆದು ಹೋಗಿದ್ದ ಅಣ್ಣನ ನೆನಪಿನಲ್ಲೇ ಇದ್ದರು. ಇನ್ ಸ್ಟಾಗ್ರಾಮ್ ರೀಲ್ ನೋಡುವಾಗ ಅದರಲ್ಲಿ ಮುರಿದ ಹಲ್ಲಿನ ವ್ಯಕ್ತಿಯನ್ನು ನೋಡಿ ಅದು ತನ್ನ ಅಣ್ಣನೇ ಎಂದು ಆಕೆ ಗುರುತಿಸಿದ್ದಾಳೆ. ಆ ಮುರಿದ ಹಲ್ಲಿನಿಂದಾಗಿ ಅಣ್ಣ-ತಂಗಿ ಮತ್ತೆ ಈಗ ಒಂದಾಗಿದ್ದಾರೆ.

ತಂಗಿಯೊಬ್ಬಳು 18 ವರ್ಷಗಳ ನಂತರ ಕಳೆದುಹೋದ ತನ್ನ ಅಣ್ಣನನ್ನು ಇನ್ಸ್ಟಾಗ್ರಾಮ್ ರೀಲ್ ಮೂಲಕ ಪತ್ತೆ ಹಚ್ಚಿದ್ದಾಳೆ. ಬಳಿಕ ಅವನನ್ನು ಸಂಪರ್ಕಿಸಿ, ಆತನ ಹಣೆಗೆ ತಿಲಕವಿಟ್ಟು ಮನೆಗೆ ಬರಮಾಡಿಕೊಂಡಿದ್ದಾಳೆ. ಹಾಥಿಪುರ್ ಗ್ರಾಮದ ನಿವಾಸಿ ರಾಜಕುಮಾರಿ ಎಂಬಾಕೆ ರೀಲ್ಸ್ ನೋಡುತ್ತಿದ್ದರು. ಈ ವೇಳೆ ಪರಿಚಿತ ಮುಖವೊಂದು ಆಕೆಯ ಕಣ್ಣುಗಳಲ್ಲಿ ನೀರು ತುಂಬಿಸಿದೆ. ಜೈಪುರದ ವ್ಯಕ್ತಿಯೊಬ್ಬ ರೀಲ್ನಲ್ಲಿ ಕಾಣಿಸಿಕೊಂಡಿದ್ದ. ಆತನ ಮುಂದಿನ ಹಲ್ಲು ಕಟ್ ಆಗಿತ್ತು. ಅದೇ ರೀತಿಯ ಹಲ್ಲು ಆಕೆಯ ಅಣ್ಣ ಬಾಲ ಗೋವಿಂದ್ ಗೆ ಬಾಲ್ಯದಿಂದಲೂ ಇತ್ತು ಎನ್ನಲಾಗಿದೆ. 18 ವರ್ಷಗಳ ಹಿಂದೆ ಬಾಲ್ ಗೋವಿಂದ್ ಫತೇಪುರ್ನ ಇನಾಯತ್ಪುರ ಗ್ರಾಮದಿಂದ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದ್ದ. ನಂತರ ಮನೆಗೆ ಬಂದಿರಲಿಲ್ಲ. ನಂತರ ಬೇರೆ ಕಡೆ ಕೆಲಸ ಆರಂಭಿಸಿದ್ದ. ಮನೆಯವರಿಗೆ ಆತನ ಸುಳಿವೇ ಇರಲಿಲ್ಲ.
ಈ ವ್ಯಕ್ತಿ ಆರಂಭದಲ್ಲಿ ಸ್ನೇಹಿತರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಆನಂತರ ಅವರ ಸಂಪರ್ಕವನ್ನೂ ಬಿಟ್ಟಿದ್ದ. ಒಮ್ಮೆ ಆತ ಮರಳಿ ಕಾನ್ಪುರಕ್ಕೆ ಬರಬೇಕೆಂದು ರೈಲು ಹತ್ತಿದ್ದಾನೆ. ಆದರೆ, ಜೈಪುರಕ್ಕೆ ಕರೆದೊಯ್ದಿದೆ. ಅಲ್ಲಿ ಬಾಲ ಗೋವಿಂದ್ ರೈಲ್ವೆ ನಿಲ್ದಾಣದಲ್ಲಿ ಓರ್ವ ವ್ಯಕ್ತಿಯನ್ನು ಭೇಟಿಯಾಗಿ ಕಾರ್ಖಾನೆಯಲ್ಲಿ ಕೆಲಸ ಪಡೆದಿದ್ದಾನೆ. ನಂತರ ಜೈಪುರದಲ್ಲಿ ಜೀವನ ಆರಂಭಿಸಿದ್ದಾನೆ. ಅಲ್ಲಿಯೇ ಯುವತಿಯನ್ನು ಮದುವೆಯಾಗಿದ್ದಾನೆ. ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಆತನ ಹಲ್ಲು ಮಾತ್ರ ಹಾಗೆಯೇ ಇತ್ತು. ಈಗ ಸಹೋದರಿ ಆತನನ್ನು ಗುರುತಿಸಿ ಮನೆಗೆ ಕರೆಯಿಸಿಕೊಂಡಿದ್ದಾರೆ.
