ಮಡಿಕೇರಿ: ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿಯೇ ಈ ಅಮಾನುಷ ಹಾಗೂ ಆಘಾತಕಾರಿ ಘಟನೆ ನಡೆದಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾ ಕೊಲೆಯಾದ ಬಾಲಕಿ. ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೀನಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ಫಲಿತಾಂಶ ಬಂದಿದ್ದರಿಂದಾಗಿ ಶಾಲೆಗೆ ತೆರಳಿ ಮರಳಿ ಹೋಗುತ್ತಿದ್ದಳು. ಈ ವೇಳೆಯೇ ಪಾಪಿಯೋರ್ವ ಅವಳನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ದರು. ಇದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ಸೋಮವಾರಪೇಟೆ ಪೊಲೀಸರಿಂದ ಅಪ್ರಾಪ್ತ ಬಾಲಕಿಯ ಎಂಗೆಜ್‌ಮೆಂಟ್ ತಡೆಯಲಾಗಿತ್ತು ಎನ್ನಲಾಗಿದೆ. ಆದರೆ, ಅಪ್ರಾಪ್ತೆಯನ್ನು ಮದುವೆಯಾಗಬೇಕಿದ್ದ ಯುವಕ, ಶಾಲೆಗೆ ಹೋಗಿ ಬರುತ್ತಿದ್ದ ಅಪ್ರಾಪ್ತೆಯನ್ನು ತಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.