ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದ್ದು, ಇದಕ್ಕಾಗಿ ಐದು ಜಾಗಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಯಾವುದನ್ನೂ ಅಂತಿಮಗೊಳಿಸಿಲ್ಲ. ಇನ್ನೊಂದು ವಾರದಲ್ಲಿ ಸಭೆ ಸೇರಿ ಅಂತಿಮ ಮಾಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವುದು ಸುಳ್ಳು. ಡಾಬಸಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆ ಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಬರಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಆದರೆ, ಮೆಟ್ರೋದವರು ಕೇಳಿರುವ ಜಾಗ ಖಾಸಗಿಯವರ ಸ್ವತ್ತಾಗಿದೆ. ಇದರಲ್ಲಿ ಕೆಐಎಡಿಬಿ ಪಾತ್ರವೇನೂ ಇಲ್ಲ. ಬಹುಮಾದರಿ ಸಾರಿಗೆ ಸಂಕೀರ್ಣವು ಒಂದೇ ಕಡೆ ಬಂದರೆ ಜನರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್ ಮಂಜುಳಾ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಹಲವರು ಇದ್ದರು.