ಚನ್ನಪಟ್ಟಣ: ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದ್ದು, ಕಾಂಗ್ರೆಸ್ ಹಾಗೂ ಎನ್ ಡಿಎ ಮೈತ್ರಿ ಮಧ್ಯೆ ಸಮರ ಶುರುವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಘಟನಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದರೂ ಬಿಜೆಪಿ ತೊರೆದು ಕೈ ಚಿತ್ರದ ಮೂಲಕ ಸ್ಪರ್ಧೆ ಮಾಡುತ್ತಿರುವ ಯೋಗೇಶ್ವರ್ ಗೆ ಮಾತ್ರ ಆತಂಕ ಶುರುವಾಗಿದೆ.
ಆರಂಭದ ಆತ್ಮವಿಶ್ವಾಸ ಈಗ ಅವರ ಮೊಗದಲ್ಲಿ ಇಲ್ಲದಾಗಿದೆ. ಸಹಜವಾಗಿ ವಿರೋಧಿ ಬಣಕ್ಕೆ ಇದು ಸಂತಸ ನೀಡುತ್ತಿದೆ. ಚನ್ನಪಟ್ಟಣವನ್ನು ಈ ಬಾರಿ ಗೆಲ್ಲಲೇ ಬೇಕು ಎಂದು ಡಿಕೆ ಸಹೋದದರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹಲವಾರು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬುವುದು ಡಿಕೆಶಿ ಯೋಜನೆಯಾಗಿದೆ. ಹೀಗಾಗಿ ಸಹೋದರರು ಜೋಡೆತ್ತಿನಂತೆ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಖಾಡಕ್ಕೆ ಇಳಿಸಿರುವ ಎಚ್ಡಿ ಕುಮಾರಸ್ವಾಮಿ ಕ್ಷೇತ್ರ ಗೆಲ್ಲಲು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಸ್ಟ್ರಾಟಜಿಗೆ ಠಕ್ಕರ್ ಕೊಡಲು ಆರಂಭಿಸಿದ್ದಾರೆ. ಹೀಗಾಗಿ ಬಿಗ್ ಫೈಟ್ ಕಂಡು ಬರುತ್ತಿದೆ. ಈ ಅಖಾಡಕ್ಕೆ ಈಗ ಸ್ವತಃ ಎಚ್ಡಿ ದೇವೇಗೌಡರು ಅಖಾಡಕ್ಕಿಳಿದಿದ್ದಾರೆ. ಅವರು ಕೂಡಾ ಕ್ಷೇತ್ರದಲ್ಲಿ ನಿರಂತರವಾಗಿ ಸಂಚಾರ ಮಾಡಿ ಪ್ರಚಾರ ನಡೆಸುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಎರಡು ಬಾರಿ ಸೋತಿರುವ ಅನುಕಂಪದ ಲಾಭ ಮಾಡಿಕೊಳ್ಳಲು ಜೆಡಿಎಸ್ ಹವಣಿಸುತಿದೆ. ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ಗೆ ಬಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಲೆಕ್ಕಾಚಾರವೇ ಬದಲಾವಣೆ ಆಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಕೈ ನಾಯಕರು ಇದ್ದರು. ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದರೂ 60-40 ಎಂಬ ವಾತಾವರಣ ಕ್ಷೇತ್ರದಲ್ಲಿ ಇತ್ತು. ಈಗ ಲೆಕ್ಕಾಚಾರ ಉಲ್ಟಾ-ಪಲ್ಟಾ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅವರು ಬಿಜೆಪಿಯ ಜೊತೆಗಿದ್ದರೂ, ಮುಸ್ಲಿಂ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸೈನಿಕನಿಗೆ ಚಿಂತೆ ಶುರುವಾಗಿದೆ.