ಬೆಳಗಾವಿ: ಇತ್ತೀಚೆಗೆ ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತದೆ ಎಂಬುವುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಚಿಕ್ಕಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಯೋಧರೊಬ್ಬರು ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ಎಂಎಲ್ ಐಆರ್ ಸಿ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಸುನೀಲ್ ಸಲಾಂ (37) ಹೃದಯಾಘಾತಕ್ಕೆ ಬಲಿಯಾದ ಯೋಧ. ನಡು ರಸ್ತೆಯಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತದೆ ಎಂಬ ಊಹೆ ಯಾರಿಗೂ ಸಿಕ್ಕಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿ ಅದರಲ್ಲಿದೆ. ಹೀಗೆಯೇ ಬೆಳಗಾವಿಯಲ್ಲಿ ಯೋಧ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಯೋಧ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಬೈಕ್ ನಿಧಾನಿಸಿ ಎದೆ ಸಾವರಿಸಿಕೊಂಡು ನಿಲ್ಲಲು ಯತ್ನಿಸಿದ್ದಾರೆ. ಆದರೆ ಕರುಣೆಯೇ ಇಲ್ಲದ ಹೃದಯ ತನ್ನ ಬಡಿತ ನಿಲ್ಲಿಸಿದೆ. ಹೀಗಾಗಿಯೇ ಆ ಯೋಧನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆಗ ಆ ಯೋಧ ರಸ್ತೆ ಬದಿಗೆ ಕುಸಿದು ಬಿದ್ದಿದ್ದಾರೆ. ಈ ಸಾವಿನ ಕ್ಷಣ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುನೀಲ್ ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್ ಚಲಿಸುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸವರಿಸಿಕೊಳ್ಳುತ್ತಲೇ ಬ್ರೇಕ್ ಹಿಡಿದು ಬೈಕ್ ನಿಧಾನ ಮಾಡಿದ್ದಾರೆ. ಆದರೆ, ಹೃದಯ ಬಡಿತ ನಿಂತಿದೆ. ಹೀಗಾಗಿ ನಡು ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ. ಸುನೀಲ್ ಅವರು ಬೈಕ್ ನಿಂದ ರಸ್ತೆ ಬದಿಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗ ಸುನೀಲ್ ಮೃತದೇಹವನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಘುಳೇವಾಡಿಗೆ ಸಾಗಿಸಲಾಗಿದ್ದು, ಸಕಲ ಸರ್ಕಾರಿ ಗೌರವಗೊಂದಿಗೆ ಯೋಧನ ಅಂತ್ಯಕ್ರಿಯೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.