ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಈ ಪೈಕಿ ಚನ್ನಪಟ್ಟಣ ಕ್ಷೇತ್ರ ಭಾರೀ ಸದ್ದು ಮಾಡಿತ್ತು. ಆರಂಭದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರೆ, ನಂತರ ಚುನಾವಣೆ ವೇಳೆ ಜೆಡಿಎಸ್ ಗೆಲುವು ನಿಶ್ಚಿತ ಎನ್ನಲಾಗಿತ್ತು. ಆದರೆ, ಈಗ ಫಲಿತಾಂಶ ಹೊರ ಬಿದ್ದಿದ್ದು, ಯೋಗೇಶ್ವರ್ ಭರ್ಜರಿ ಜಯ ಸಾಧಿಸಿದ್ದಾರೆ. ಅಲ್ಲದೇ, ಹಳೆಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 1,12,642 ಮತಗಳನ್ನು ಪಡೆದು 25,413 ಮತಗಳ ಅಂತರದ ಜಯ ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ 87,229 ಮತ ಪಡೆದು ಸೋಲು ಕಂಡಿದ್ದಾರೆ.
ಸಿಪಿ ಯೋಗೇಶ್ವರ್ ಅವರು ಕಳೆದ ಎರಡೂ ಬಾರಿ ಕುಮಾರಸ್ವಾಮಿ ವಿರುದ್ಧ ಸೋಲುಕಂಡಿದ್ದರೂ ಸಹ ಅನಿತಾ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ, ಸೇಡು ತೀರಿಸಿಕೊಂಡಿದ್ದಾರೆ.
ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧ ಇದೇ ಕ್ಷೇತ್ರದಲ್ಲಿ ಎರಡು ಬಾರಿ ಸೋತಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ 87,995 ಮತಗಳನ್ನು ಪಡೆದಿದ್ದರು. ಬಿಜೆಪಿಯ ಸಿ. ಪಿ. ಯೋಗೇಶ್ವರ 66,465 ಮತಗಳನ್ನು ಪಡೆದು ಸೋಲು ಕಂಡಿದ್ದರು. 2023ರಲ್ಲಿ ಸಿ. ಪಿ. ಯೋಗೇಶ್ವರ ಬಿಜೆಪಿಯಿಂದ ಕಣಕ್ಕಿಳಿದು 80,677 ಮತಗಳನ್ನು ಪಡೆದಿದ್ದರೆ, ಎಚ್. ಡಿ. ಕುಮಾರಸ್ವಾಮಿ 96,592 ಮತ ಪಡೆದು ಜಯ ಸಾಧಿಸಿದ್ದರು.
ಇನ್ನೂ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನಿತಾ ಕುಮಾರಸ್ವಾಮಿ ಅವರನ್ನು ಯೋಗೇಶ್ವರ್ ಸೋಲಿಸಿದ್ದರು. ಅನಿತಾ ಕುಮಾರಸ್ವಾಮಿ 73,635 ಮತಗಳನ್ನು ಪಡೆದುಕೊಂಡಿದ್ದರೆ, ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಸಿ.ಪಿ. ಯೋಗೇಶ್ವರ್ 80,099 ಮತಗಳನ್ನು ಪಡೆದು ಜಯಗಳಿಸಿದ್ದರು. ಆಂತರ ಕುಮಾರಸ್ವಾಮಿ ಸೋಲಿಸಿದ್ದರು. ಈಗ ಕುಮಾರಸ್ವಾಮಿ ಮಗನನ್ನು ಸೋಲಿಸುವ ಮೂಲಕ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.