
ಇತ್ತೀಚೆಗೆ ಜನರಲ್ಲಿ ಮಾನವೀಯತೆ ಮರೆಯಾಗುತ್ತಿರುವ ಪ್ರಸಂಗಗಳು ಗೋಚರಿಸುತ್ತಲೇ ಇವೆ. ಅಮಾನುಷವಾಗಿ ನಡೆದುಕೊಳ್ಳುತ್ತಿರುವ ಹಲವಾರು ಘಟನೆಗಳು ನಡೆಯುತ್ತಲೇ ಇವೆ. ಅದೇ ರೀತಿ ಇಲ್ಲೊಬ್ಬ ಪಾಪಿ ಸತ್ತ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಅಮಾನವೀಯ ದೃಶ್ಯ ಕಂಡು ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.
ಗುಜರಾತಿನ ಅಹಮದಾಬಾದ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸತ್ತ ಬೀದಿ ನಾಯಿಯನ್ನು ತನ್ನ ಕಾರಿನ ಹಿಂಬದಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ಕೌಶಿಕ್ ಕಾಂತೇಚಾ (@kaushikdd) ಎಂಬವರು ಈ ಕುರಿತ ಪೋಸ್ಟ್ ನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಹಮದಾಬಾದ್ ನಲ್ಲಿ ಮಾನವೀಯತೆ ಮರೆತ ವ್ಯಕ್ತಿ… ಸತ್ತ ನಾಯಿಯನ್ನು ಗಾಡಿಗೆ ಕಟ್ಟಿ ಈ ರೀತಿ ಎಳೆದುಕೊಂಡು ಹೋಗುವುದು ಎಷ್ಟು ಸೂಕ್ತ?” ಎಂಬ ಶಿರ್ಷಿಕೆ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸತ್ತ ನಾಯಿಯನ್ನು ಕಾರಿಗೆ ಕಟ್ಟಿ, ಆ ಶ್ವಾನವನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ಅಮಾನವೀಯ ದೃಶ್ಯ ಕಾಣಬಹುದು. ಇಂತಹ ಮೃಗೀಯ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ.
