ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೊದಲ ಗಂಡನಿಗೆ ಜನಿಸಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆ ಮಕ್ಕಳ ಜವಾಬ್ದಾರಿ ತನಗೆ ಬೇಡ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗಂಡನಿಂದ ವಿಚ್ಚೇದನ ಪಡೆದು ವಾಸವಾಗಿದ್ದ ಅನಿತಾಳನ್ನು ಕೊಲೆಯ ಆರೋಪಿ 9 ವರ್ಷಗಳ ಹಿಂದೆಯೇ ಉತ್ತರ ಭಾರತ ಮೂಲದ ಸುಮಿತ್ ಮದುವೆ ಮಾಡಿಕೊಂಡಿದ್ದ. ಮದುವೆ ಸಂದರ್ಭದಲ್ಲಿ ಮೊದಲ ಗಂಡನಿಗೆ ಹುಟ್ಟಿದ್ದ ಮಕ್ಕಳನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದ್ದ. ಅಲ್ಲದೇ, ಸುಮಾರು 9 ವರ್ಷಗಳ ಕಾಲ ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿಯೇ ಜೀವನ ಸಾಗಿಸಿದ್ದ. ಆದರೆ, ಮಕ್ಕಳು ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಕುಟುಂಬ ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ವಾಸವಿದ್ದರು. 14 ಹಾಗೂ 15 ವರ್ಷದ ಹೆಣ್ಣು ಮಕ್ಕಳನ್ನು ಮಲತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸೋನಿಯಾ ಹಾಗೂ ಸೃಷ್ಟಿ ಕೊಲೆಯಾದ ಅಪ್ರಾಪ್ತರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಿತ್ ಜೆಪ್ಟೊದಲ್ಲಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಶನಿವಾರ ಮಧ್ಯಾಹ್ನ ಹೆಂಡತಿ ಅನಿತಾ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋದ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ತಾಯಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.