ಕೊಡಗು: ಆಸ್ತಿಗಾಗಿ ಪಾಪಿ ಮಗನೊಬ್ಬ ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ನಂತರ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪಾಪಿ ಮಗ ಕಥೆ ಕಟ್ಟಿದ್ದ. ಆದರೆ, ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡುಮಂಗಳೂರು ಗ್ರಾಮದ ಕೆ.ಎಂ.ಚಂದ್ರಶೇಖರ್ (28) ಎಂಬ ಪಾಪಿಯೇ ತಂದೆ ಮಂಜಣ್ಣ ಎಂಬುವವರನ್ನು ಕೊಲೆ ಮಾಡಿದ್ದಾನೆ. ಮಾರ್ಚ್ 16 ರಂದು ಚಿಕ್ಕಬೆಟ್ಟಗೇರಿ ಗ್ರಾಮದ ಬಳಿ ಕಾವೇರಿ ಹೊಳೆ ದಡದಲ್ಲಿ ಮಂಜಣ್ಣ ಅವರ ಶವ ಪತ್ತೆಯಾಗಿತ್ತು. ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಮೃತ ಮಂಜಣ್ಣ ಕೌಟುಂಬಿಕ ಸಮಸ್ಯೆಯಿಂದಾಗಿ ಪತ್ನಿ ಮತ್ತು ಮಕ್ಕಳಿಂದ ಬೇರೆಯಾಗಿ ಒಬ್ಬರೇ ವಾಸಿಸುತ್ತಿದ್ದರು.
ಅಲ್ಲದೇ ಸುಮಾರು 14 ವರ್ಷಗಳ ಹಿಂದೆ ಕಾಫಿ ಕ್ಯೂರಿಂಗ್ ವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಿಷಿನ್‌ಗೆ ಎಡಗಾಲು ಸಿಲುಕಿ ತುಂಡಾಗಿತ್ತು. ಈ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರು ಕೊಲೆಯ ಹಿಂದಿನ ರಹಸ್ಯ ಬೇಧಿಸಿದ್ದಾರೆ.
”ಮಂಜಣ್ಣ ಬಳಿ ಇದ್ದ ಹಣ ಮತ್ತು ಆಸ್ತಿಗಾಗಿ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಸೇರಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾನೆ. ಆನಂತರ ಹಲ್ಲೆ ಮಾಡಿದ್ದಾರೆ. ಆಗ ಪ್ರಜ್ಞೆ ತಪ್ಪಿದ ಮಂಜಣ್ಣ ಸತ್ತಿದ್ದಾರೆಂದು ಭಾವಿಸಿ ಚಿಕ್ಕಬೆಟ್ಟಗೇರಿಯಲ್ಲಿ ಕಾವೇರಿ ನದಿಗೆ ಎಸೆದಿದ್ದಾರೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.