ಉಡುಪಿ: ಪಾಪಿ ಪತಿಯೊಬ್ಬಾತ ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಕೊಯ್ದು, ನಂತರ ಕೈಯಲ್ಲಿ ಕತ್ತಿ ಹಿಡಿದು ಡ್ಯಾನ್ಸ್ ಮಾಡಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಉಡುಪಿ (Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಬಸ್ರೂರು ಕಾಶಿಮಠದ ರೆಸಿಡೆನ್ಶಿಯಲ್ ಬ್ಲಾಕ್ ನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಅನಿತಾ (38) ಎಂಬ ಮಹಿಳೆಯೇ ತನ್ನ ಗಂಡನಿಂದ ಹಲ್ಲೆಗೊಳಗಾದ ದುರ್ದೈವಿ. ಸೊರಬ ತಾಲೂಕು ಮೂಲದ ಲಕ್ಷ್ಮಣ (ರಮೇಶ್) ಹಲ್ಲೆ ಮಾಡಿರುವ ಆರೋಪಿ.
ಸೊರಬ ತಾಲೂಕು ಮೂಲದ ಲಕ್ಷ್ಮಣ (ರಮೇಶ್) ಮತ್ತು ಅನಿತಾ ದಂಪತಿ ಕಾಶಿಮಠದ ತೋಟ ನೋಡಿಕೊಳ್ಳುತ್ತಿದ್ದರು. 4 ತಿಂಗಳ ಹಿಂದೆಯಷ್ಟೆ ತೋಟದ ಕೆಲಸಕ್ಕೆ ಬಂದು ಉಡುಪಿಯಲ್ಲಿ ವಾಸಿಸಲು ಆರಂಭಿಸಿದ್ದರು. ಆದರೆ, ಪಾಪಿ ಪತಿ ಶನಿವಾರ ಕಂಠಪೂರ್ತಿ ಕುಡಿದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಪತ್ನಿಯ ಕುತ್ತಿಗೆ ಕೊಯ್ದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನ ಕಂಡು ಮನೆ ಬಾಗಿಲು ಹಾಕಿಕೊಂಡು, ಕೈಯಲ್ಲಿ ಕತ್ತಿ ಹಿಡಿದು, ಮನೆಯೊಳಗೆ ಡ್ಯಾನ್ಸ್ ಮಾಡುತ್ತ ವಿಕೃತಿ ಮೆರೆದಿದ್ದಾನೆ.
ಇದನ್ನು ಅಕ್ಕಪಕ್ಕದವರು ಗಮನಿಸಿ, ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆ ರಕ್ತದ ಮೊಡವಿನಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೊಂದೆಡೆ ಆರೋಪಿ ಕೈಯಲ್ಲಿ ಕತ್ತಿ ಹಿಡಿದು ಡ್ಯಾನ್ಸ್ ಮಾಡುತ್ತ ದೆವ್ವ ಬಂದವರಂತೆ ವರ್ತಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ಹತೋಟಿ ತರಲು ಹರಸಾಹಸ ಪಟ್ಟಿದ್ದಾರೆ. ಆನಂತರ ಅಶ್ರುವಾಯು ಪ್ರಯೋಗಿಸಿ ಸುಮಾರು ಒಂದೂವರೆ ಗಂಟೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.