ಬೆಂಗಳೂರು : 2026ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಂಡಿಸಿದ್ದಾರೆ. ಬೆಂಗಳೂರಿನ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯನ್ನ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ದಕ್ಷಿಣ ಭಾರತದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆ ತನ್ನ 125 ವರ್ಷಗಳ ಇತಿಹಾಸ ಹೊಂದಿದೆ. ಇದೀಗ ವಿಕ್ಟೋರಿಯಾ ಆಸ್ಪತ್ರೆಯನ್ನ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ವರ್ಷ ಪ್ರಾರಂಭಿಸಲಾದ, ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.24ರಷ್ಟು ಇಳಿಕೆಯಾಗಿರುತ್ತದೆ. ಈ ಅಭಿಯಾನದಡಿ ಪ್ರತಿ ತಾಯಂದಿರ ಮರಣವನ್ನು ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಸೇವೆಗಳನ್ನು ನೀಡಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಿಗೆ ಮಾರ್ಗದರ್ಶನ, ಹೆಚ್ಚಿನ ಮಾನವ ಸಂಪನ್ಮೂಲ ಮತ್ತು ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ.
ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಶಾಲಾ ಕಾಲೇಜುಗಳ 52 ಲಕ್ಷ ಮಕ್ಕಳಿಗೆ ರಕ್ತಹೀನತೆ ತಪಾಸಣೆ ನಡೆಸಲಾಗಿದೆ. ರಕ್ತಹೀನತೆ ಕಂಡುಬಂದಿರುವ 11.7 ಲಕ್ಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 3.7 ಲಕ್ಷ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಉಳಿದ ಮಕ್ಕಳಿಗೆ ಚಿಕಿತ್ಸೆ ಮತ್ತು ಅನುಸರಣೆ ಮುಂದುವರೆಸಲಾಗಿದೆ.
ಹೃದಯದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ST-Elevated Myocardial Infarction (STEMI) ಕಾರ್ಯಕ್ರಮದಡಿ ಒಟ್ಟು 9.4 ಲಕ್ಷ ECG ಗಳನ್ನು ಮಾಡಲಾಗಿದ್ದು, 13,933 ತೀವ್ರ ಹೃದಯಾಘಾತದ ರೋಗಿಗಳನ್ನು ಪತ್ತೆ ಹಚ್ಚಿ ಇವರಲ್ಲಿ 7,668 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು.
ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಲಿ ಚಾಲ್ತಿಯಲ್ಲಿರುವ 2018ರ ಚಿಕಿತ್ಸಾ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಹೆಚ್.ಬಿ.ಪಿ.-2022 ಪ್ಯಾಕೇಜ್ ದರಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರಿಂದ ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ. ಇದಕ್ಕಾಗಿ 400 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು. ಸದರಿ ಯೋಜನೆಯನ್ನು ಯಶಸ್ವಿನಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ರಾಜ್ಯ ವಿಮಾ ಯೋಜನೆ ಮತ್ತು ಅನ್ವಯಿಸುವ ಇತರ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ .
ಇದನ್ನೂ ಓದಿ : Karnataka Budget 2026 | ಅನ್ನಭಾಗ್ಯ 5 ಕೆಜಿ ಅಕ್ಕಿ ಬದಲಾಗಿ ‘ಇಂದಿರಾ ಕಿಟ್’ ವಿತರಣೆ



















