ತಿರುವನಂತಪುರಂ: ಕೇರಳದಲ್ಲೊಂದು ಆಘಾತಕಾರಿ ಅಪರಾಧ ಕೃತ್ಯ ನಡೆದಿದ್ದು, ಯುವಕನೊಬ್ಬ ಪ್ರಿಯತಮೆ, 9ನೇ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ ತಮ್ಮ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ತಾಯಿಗೆ ಚಾಕುವಿನಿಂದ ಇರಿದಿದ್ದು, ಈ ಪೈಕಿ ತಾಯಿಯೊಬ್ಬರು ಹೊರತುಪಡಿಸಿ ಉಳಿದ ಎಲ್ಲ 5 ಮಂದಿಯೂ ಸಾವಿಗೀಡಾಗಿದ್ದಾರೆ. ಕೇವಲ 3 ಗಂಟೆಯ ಅವಧಿಯಲ್ಲಿ ಆತ ಈ ಕೃತ್ಯ ಎಸಗಿದ್ದಾನೆ.
23 ವರ್ಷದ ಅಫಾನ್ ಎಂಬಾತನೇ ಈ ಘೋರ ಕೃತ್ಯವೆಸಗಿದ ದುಷ್ಕರ್ಮಿ. ಪುತ್ರನಿಂದ ಚೂರಿ ಇರಿತಕ್ಕೆ ಒಳಗಾಗಿರುವ ಆತನ ತಾಯಿ ಶೆಮಿ ಗಂಭೀರವಾಗಿ ಗಾಯಗೊಂಡಿದ್ದು, ತಿರುವನಂತಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
5 ಮಂದಿಯನ್ನು ಕೊಂದ ಬಳಿಕ ಅಫಾನ್ ತಾನೇ ವೆಂಜರಮೂಡು ಪೊಲೀಸರಿಗೆ ಶರಣಾಗಿದ್ದಾನೆ. ತಾನು ತನ್ನ ಪ್ರಿಯತಮೆ ಹಾಗೂ ತನ್ನದೇ ಕುಟುಂಬದ 5 ಮಂದಿಯನ್ನು ಹತ್ಯೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ 3 ಮನೆಗಳಲ್ಲಿ(ಪೆರುಮಳ, ಪಂಗೋಡ್, ಆರ್.ಎಲ್.ಪುರಂ) 5 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಇನ್ನು, ಅಫಾನ್‌ನ ತಾಯಿಯೂ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಕಾರಣವೇನು?
ಅಫಾನ್‍ನ ಕುಟುಂಬವು ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿತ್ತು. ಅಫಾನ್ ವಿಪರೀತ ಸಾಲ ಮಾಡಿಕೊಂಡಿದ್ದ. ಜೊತೆಗೆ ಹೆಚ್ಚಿನ ಹಣಕ್ಕಾಗಿ ಆತ ತಂದೆಯನ್ನು ಪೀಡಿಸತೊಡಗಿದ್ದ. ಅವರು ಕೊಡದ ಹಿನ್ನೆಲೆಯಲ್ಲಿ ಕುಟುಂಬದ ಇತರರ ಬಳಿ ನೆರವು ಕೇಳಿದ್ದಾನೆ. ಆದರೆ ಅವರು ನಿರಾಕರಿಸಿದ್ದರಿಂದ ರೊಚ್ಚಿಗೆದ್ದ ಅಫಾನ್ ಸೋಮವಾರ ಸಂಜೆ ಎಲ್ಲರನ್ನೂ ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ, ಇನ್ನೊಂದು ಮೂಲಗಳು ಪ್ರಕಾರ, ಫರ್ಜಾನಾಳನ್ನು ಅಫಾನ್ ಪ್ರೀತಿಸುತ್ತಿದ್ದ. ಇದಕ್ಕೆ ಮನೆಯವರ ತೀವ್ರ ವಿರೋಧವಿತ್ತು.
ವಿರೋಧದ ನಡುವೆಯೂ ಆತ ಮೊನ್ನೆ ಫರ್ಜಾನಾಳನ್ನು ನೇರವಾಗಿ ತನ್ನ ಮನೆಗೆ ಕರೆತಂದಿದ್ದ. ಇದೇ ವಿಷಯಕ್ಕೆ ಮನೆಯವರು ಮತ್ತು ಅಫಾನ್ ನಡುವೆ ವಾಗ್ವಾದ ನಡೆದು, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅಫಾನ್ ತನ್ನ ಪ್ರೇಯಸಿ ಫರ್ಜಾನಾಳನ್ನೂ ಕೊಚ್ಚಿ ಕೊಲೆ ಮಾಡಿದ್ದು, ತನ್ನದೇ ಕಿರಿಯ ಸಹೋದರ ಅಫ್ಸಾನ್, ಅಜ್ಜಿ ಸಲ್ಮಾ ಬೀವಿ , ಅಪ್ಪನ ಸಹೋದರ ಲತೀಫ್(ಸಿಆರ್‌ಪಿಎಫ್‌ನ ನಿವೃತ್ತ ಅಧಿಕಾರಿ), ಅವರ ಪತ್ನಿ ಶಾಹಿದಾರನ್ನೂ ಹತ್ಯೆಗೈದಿದ್ದಾನೆ.
ಒಟ್ಟು 2 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿವೆ. ಎಲ್ಲರನ್ನೂ ಹತ್ಯೆ ಮಾಡಿದ ಬಳಿಕ ಠಾಣೆಯೊಂದಕ್ಕೆ ತೆರಳಿ ಕುಟುಂಬದವರನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಜತೆಗೆ ತಾನೂ ಇಲಿ ಪಾಷಾಣ ಸೇವಿಸಿರುವುದಾಗಿ ಹೇಳಿಕೊಂಡಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವಿದೇಶದಲ್ಲಿದ್ದ ಅಪ್ಪನ ಜೊತೆ ಇದ್ದ ಆರೋಪಿ ಅಫಾನ್ ಇತ್ತೀಚೆಗಷ್ಟೇ ಸ್ವದೇಶಕ್ಕೆ ಆಗಮಿಸಿದ್ದ. ತಾಯಿ ಶೆಮಿ ಕ್ಯಾನ್ಸರ್ ರೋಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಅಫಾನ್ ಮೊಬೈಲ್ ಫೋನ್ ಕರೆಗಳ ವಿವರ ಪರಿಶೀಲಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.