ತೆಲಂಗಾಣ: ಮನ ಕಲಕುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡು ಜನರು ಮಮ್ಮಲ ಮರಗುತ್ತಿದ್ದಾರೆ. ತಂದೆ ಕಳೆದುಕೊಂಡು ತಬ್ಬಲಿಯಾಗಿದ್ದ ಅಪ್ರಾಪ್ತ ಮಗಳು, ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿರುವ ವಿಡಿಯೋವೊಂದು ವೈರಲ್ ಆಗಿದೆ.
ತಾಯಿಯ ಅಂತ್ಯಸಂಸ್ಕಾರ ನಡೆಸಲು 11 ವರ್ಷದ ಬಾಲಕಿ ಭಿಕ್ಷಾಟನೆ ಮಾಡಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟನದ ತರೋಡ ಎಂಬಲ್ಲಿ ನಡೆದಿದೆ. 11 ವರ್ಷದ ದುರ್ಗಾ ಎಂಬ ಬಾಲಕಿ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ್ದಾಳೆ. ಈ ವಿಡಿಯೋ ಕಂಡು ಜನರು ಕುಳಿತಲ್ಲಿಯೇ ಬಿಕ್ಕಳಿಸುತ್ತಿದ್ದಾರೆ.
ಗಂಗಾಮಣಿ(36) ಸಾವನ್ನಪ್ಪಿದ ತಾಯಿ. ಹಲವು ವರ್ಷಗಳಿಂದ ಗಂಡನಿಂದ ದೂರವಾಗಿದ್ದ ಗಂಗಾಮಣಿ. ಒಬ್ಬಳೇ ಮಗಳನ್ನು ಶಾಲೆಗೆ ಸೇರಿಸಿ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಇತ್ತೀಚೆಗೆ ಬಾಲಕಿಯ ತಂದೆಯೂ ಸಾವನ್ನಪ್ಪಿದ್ದರು. ಆದರೆ, ಬದುಕಿನ ಕಷ್ಟವೋ? ಪತಿಯ ಅಗಲಿಕೆಯೋ? ತಾಯಿ ಕೂಡ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಬಾಲಕಿ ದುರ್ಗಾಗೆ ದಿಕ್ಕೇ ತೋಚದಂತಾಗಿದೆ. ಇನ್ನೊಂದೆಡೆ ಸಂಬಂಧಿಕರು ಅವಳ ಸಹಾಯಕ್ಕೆ ಬಂದಿಲ್ಲ. ಹೀಗಾಗಿ ಅನಾಥವಾಗಿ ಬೀದಿಗೆ ಬಿದ್ದಿರುವ ಬಾಲಕಿ, ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ್ದಾಳೆ.
ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಮನೆ ಮುಂದೆ ಟವೆಲ್ ಹಾಸಿ ಭಿಕ್ಷೆ ಬೇಡಿದ್ದಾಳೆ. ಬಾಲಕಿ ದುರ್ಗಾ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಭಿಕ್ಷೆಯಿಂದ ಬಾಲಕಿ ಹಣ ಸಂಗ್ರಹಿಸಿ ಸ್ಥಳೀಯರ ನೆರವಿನಿಂದ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಘಟನೆ ಮಾಹಿತಿ ತಿಳಿದು ಮಾಜಿ ಸಚಿವ ಕೆಟಿಆರ್ ಬಾಲಕಿಯ ಸಹಾಯಕ್ಕೆ ದಾವಿಸಿದ್ದಾರೆ. ಆ ಬಾಲಕಿಗೆ ಬಿಎಆರ್ ಪಕ್ಷದ ವತಿಯಿಂದ 10 ಸಾವಿರ ರೂ. ನೆರವು ನೀಡಿದ್ದಾರೆ. ಸ್ಥಳೀಯ ಮುಖಂಡರು ಬಾಲಕಿಗೆ ಸಾಂತ್ವನ ಹೇಳಿ, ಬದುಕಿಗೆ ದಾರಿದೀಪವಾಗಲು ಮುಂದಾಗಿದ್ದಾರೆ.