ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ಭಾರೀ ಆಘಾತ ಎದುರಾಗಿದೆ. ಆಪ್ ಸರ್ಕಾರದ ಅಬಕಾರಿ ನೀತಿಯಲ್ಲಿ ನಡೆದ ಅವ್ಯವಹಾರಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ 2,026 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲ(ಸಿಎಜಿ) ವರದಿ ಹೇಳಿದೆ. ಸೋರಿಕೆಯಾಗಿರುವ ಸಿಎಜಿ ವರದಿಯಲ್ಲಿ, ಸರ್ಕಾರದ ಲೋಪಗಳು, ನೀತಿಯಲ್ಲಿನ ಅಕ್ರಮಗಳು ಹಾಗೂ ಪರವಾನಗಿ ವಿತರಣೆಯಲ್ಲಿ ಆದ ನಿಯಮ ಉಲ್ಲಂಘನೆಗಳ ಪ್ರಸ್ತಾಪವಿದೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ನೀತಿಯು ತನ್ನ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿದೆ ಮಾತ್ರವಲ್ಲ ಈ ನೀತಿಯಿಂದಾಗಿ ಆಪ್ ನಾಯಕರು ಭಾರೀ ಮೊತ್ತದ ಕಿಕ್ ಬ್ಯಾಕ್ ಗಳನ್ನು ಪಡೆದಿದ್ದಾರೆ ಎಂದೂ ಆರೋಪಿಸಲಾಗಿದೆ. ತಜ್ಞರ ಸಮಿತಿ ನೀಡಿದ್ದ ಶಿಫಾರಸುಗಳನ್ನೂ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ನೇತೃತ್ವದ ಸಚಿವರ ಸಮಿತಿ ಗಾಳಿಗೆ ತೂರಿತ್ತು ಎಂದೂ ವರದಿ ಹೇಳಿದೆ.
ಸಿಎಜಿ ವರದಿಯನ್ನು ಇನ್ನಷ್ಟೇ ದೆಹಲಿ ವಿಧಾನಸಭೆಯಲ್ಲಿ ಮಂಡಿಸಬೇಕಾಗಿದೆ. ಅದಕ್ಕೂ ಮೊದಲೇ ಅದು ಸೋರಿಕೆಯಾಗಿದೆ. ಹಲವು ದೂರುಗಳಿದ್ದ ಹೊರತಾಗಿಯೂ ಕೆಲವು ಕಂಪನಿಗಳಿಗೆ ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬಿಡ್ಡರ್ ಗಳ ಹಣಕಾಸು ಸ್ಥಿತಿಯನ್ನೂ ಪರಿಶೀಲಿಸಿರಲಿಲ್ಲ. ನಷ್ಟದಲ್ಲಿರುವ ಕಂಪನಿಗಳಿಗೂ ಪರವಾನಗಿ ನೀಡಲಾಗಿತ್ತು ಮತ್ತು ಲೈಸೆನ್ಸ್ ನವೀಕರಣ ಮಾಡಲಾಗಿತ್ತು ಎಂದೂ ಸೋರಿಕೆಯಾದ ವರದಿ ತಿಳಿಸಿದೆ.
ಇದಿಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸಿರುವವರ ವಿರುದ್ಧ ಉದ್ದೇಶಪೂರ್ವಕವಾಗಿಯೇ ಸರ್ಕಾರ ಕ್ರಮ ಕೈಗೊಳ್ಳುವುದಾಗಲೀ, ದಂಡ ವಿಧಿಸುವುದಾಗಲೀ ಮಾಡಿಲ್ಲ. ಸಂಪುಟದ ಒಪ್ಪಿಗೆಯಿಲ್ಲದೇ, ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಪಡೆಯದೇ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಅಬಕಾರಿ ನೀತಿ ಪ್ರಕರಣ?:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ವಲಯದ ಸುಧಾರಣೆಗಾಗಿ ಮತ್ತು ಆದಾಯ ಹೆಚ್ಚಳದ ನಿಟ್ಟಿನಲ್ಲಿ 2021ರಲ್ಲಿ ಆಪ್ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಪರಿಚಯಿಸಿತ್ತು. ಈ ನೀತಿಯನ್ವಯ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೂ ಅವಕಾಶ ಕಲ್ಪಿಸಲಾಯಿತು. ಆದರೆ ಸರ್ಕಾರವು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಕಿಕ್ ಬ್ಯಾಕ್ ಪಡೆದು ತನಗೆ ಬೇಕಾದ ಕಂಪನಿಗಳಿಗೆ ಪರವಾನಗಿ ನೀಡಿದೆ ಹಾಗೂ ಲಂಚ ಪಡೆದು ಲೈಸೆನ್ಸ್ ವಿತರಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಎಂಟ್ರಿಯಾಗಿ, ಪ್ರಕರಣದ ಬಗ್ಗೆ ತನಿಖೆ ಆರಂಭಿಸಿತ್ತು. ನಂತರದಲ್ಲಿ, ಪ್ರಕರಣ ಸಂಬಂಧ ಅಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್, ಸತ್ಯೇಂದ್ರ ಜೈನ್ ಸೇರಿದಂತೆ ಆಪ್‌ನ ಪ್ರಮುಖ ನಾಯಕರನ್ನು ಬಂಧಿಸಲಾಗಿತ್ತು. ನಂತರದಲ್ಲಿ ಅವರಿಗೆ ಜಾಮೀನು ಸಿಕ್ಕಿತ್ತು.