ಹಾಸನ : ಹುಟ್ಟುಹಬ್ಬ ಆಚರಿಸಲು ತೆರಳಿದ್ದ ರೌಡಿಶೀಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಕಾರ್ತಿಕ್ (36) ಎಂದು ಗುರುತಿಸಲಾಗಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೇಲೂರು ತಾಲ್ಲೂಕಿನ ಕೋಟಿಗಾನಹಳ್ಳಿ ಬಳಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಾರ್ತಿಕ್ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಮಾಹಿತಿಯ ಪ್ರಕಾರ, ಕಾರ್ತಿಕ್ ಸ್ನೇಹಿತರೊಂದಿಗೆ ಬರ್ತ್‌ಡೇ ಪಾರ್ಟಿಗೆಂದು ತೊಳಲು ಗ್ರಾಮದ ಬಳಿಯ ಬಾರ್‌ಗೆ ತೆರಳಿದ್ದರು. ನಂತರ ಅವರು ಬೈಕ್ ಸಮೇತ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದರು.
ಮೃತನ ಸಹೋದರ ಕೌಸಿಕ್, ತಮ್ಮನನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


















