ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿ ರೌಡಿ ಗ್ಯಾಂಗ್ನಿಂದ ಇಬ್ಬರು ಯುವಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಗುಡ್ಡೆಯ ಬಾಳೆಕೆರೆ ಏರಿಯಲ್ಲಿ ಈ ಘಟನೆ ನಡೆದಿದೆ. ಪುನೀತ್ ಮತ್ತು ರಫೆಲ್ ಆಂಥೋನಿ ಎಂಬ ಯುವಕರ ಮೇಲೆ ರೌಡಿಶೀಟರ್ಗಳಾದ ಕೋಳಿ ಫಾರಂ ಗಜ, ಆಂಥೋನಿ ಸೈಮನ್, ವಿನಯ್ ಹಾಗೂ ಗ್ಯಾಂಗ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳ 22ರಂದು ಮಧ್ಯಾಹ್ನ, ಆರೋಪಿಗಳು ಏರಿಯ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಪುನೀತ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆ ಪುನೀತ್, ಆಂಥೋನಿ ಸೈಮನ್ಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದ ಎನ್ನುವ ಕಾರಣಕ್ಕೆ ಅವನನ್ನು ಕೆರೆಯ ಏರಿಯ ಮೇಲೆ ಎಳೆದುಕೊಂಡು ಬಂದು ಚಾಕು ಹಾಗೂ ದೊಣ್ಣೆಗಳಿಂದ ಮನಸೋ ಇಚ್ಛೆ ಥಳಿಸಿರುವ ಆರೋಪ ಕೇಳಿಬಂದಿದೆ.
ಘಟನೆಯನ್ನು ಕಂಡ ತಟಗುಪ್ಪೆ ಗ್ರಾಮದ ರಫೆಲ್ ಆಂಥೋನಿ, “ಯಾಕ್ರೋ ಅವನಿಗೆ ಹೊಡೆಯುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾನೆ. ಇದರಿಂದ ಕೆರಳಿದ ರೌಡಿ ಗ್ಯಾಂಗ್, ಅವನ ಮೇಲೂ ಹಲ್ಲೆ ನಡೆಸಿ, ದೊಣ್ಣೆ ಹಾಗೂ ಚಾಕುಗಳಿಂದ ಥಳಿಸಿ, ಬಳಿಕ ಸುಮಾರು 10 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದ ರಫೆಲ್ ಆಂಥೋನಿಯ ಕೈ ಮತ್ತು ಕಾಲಿನ ಮೂಳೆಗಳು ಮುರಿದಿದ್ದು, ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯದಲ್ಲಿ ನಡೆದ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೆ ಇಂತಹ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಗಾಯದ ಭೀತಿ | ಶಿವಂ ದುಬೆ ‘ಕೈ’ ಕೊಡ್ತಾರಾ?


















