ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ಮಾತಿದೆ. ಅದರಂತೆ, ಬಿಜೆಪಿ ವಿರುದ್ಧ ಹೋರಾಡಲು ಕಳೆದ ಲೋಕಸಭೆ ಚುನಾವಣೆ ವೇಳೆ ಅಸ್ತಿತ್ವಕ್ಕೆ ಬಂದ ಇಂಡಿಯಾ ಒಕ್ಕೂಟದಲ್ಲೀಗ ಭಿನ್ನಮತ ಸ್ಫೋಟಿಸುವ ಆತಂಕ ಎದುರಾದಂತಿದೆ. ಸ್ನೇಹಿತರಂತೆ ಒಗ್ಗಟ್ಟಾದವರು ಒಡೆದ ಮನೆಯಿಂದ ದೂರಾಗುವ ಸೂಚನೆ ಕಾಣುತ್ತಿದೆ.
ಹೌದು! ಶತ್ರುಗಳೇ ಇಲ್ಲ ಎಂಬಂತಾಗಿದೆ. ಅದರಲ್ಲೂ, ಕಳೆದ ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಇಂಡಿಯಾ ಒಕ್ಕೂಟದಲ್ಲಿ ಭಿನ್ನಮತ ತಲೆದೋರಿದ್ದು, ಶೀಘ್ರದಲ್ಲೇ ಒಕ್ಕೂಟವು ಛಿದ್ರವಾಗಲಿದೆ ಎಂದು ಹೇಳಲಾಗುತ್ತಿದೆ.
ಶತಾಯ ಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣದಿಂದ ಸಮಾನ ಮನಸ್ಕ ಪ್ರತಿಪಕ್ಷಗಳೆಲ್ಲ ಸೇರಿ 2023ರ ಜುಲೈನಲ್ಲಿ ಇಂಡಿಯಾ ಒಕ್ಕೂಟವನ್ನು ಸ್ಥಾಪಿಸಿದವು. ಆದರೆ, ಅಧಿಕಾರವೊಂದೇ ಒಕ್ಕೂಟದ ಮಿತ್ರಪಕ್ಷಗಳ ಉದ್ದೇಶವಾಗಿರುವುದರಿಂದ ಈಗ ನಾಯಕತ್ವಕ್ಕಿಗ ಆಂತರಿಕವಾಗಿ ಕಚ್ಚಾಡುತ್ತಿವೆ. ಇದು ಈಗ ಒಕ್ಕೂಟದ ಒಗ್ಗಟ್ಟಿಗೆ ಆತಂಕ ತಂದಿದೆ.
ಇಂಡಿಯಾ ಒಕ್ಕೂಟದ ನೇತೃತ್ವ ವಹಿಸಿಕೊಂಡರೆ ಮಮತಾ ಬ್ಯಾನರ್ಜಿ ಅವರು ದೇಶಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಗ ದೀದಿ ರಾಷ್ಟ್ರೀಯ ನಾಯಕಿ ಸ್ಥಾನದಲ್ಲಿದ್ದರೆ ಮತ್ತೆ ಟಿಎಂಸಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಅವರದ್ದಾಗಿದೆ. ಹಾಗಾಗಿ, “ಅವಕಾಶ ಸಿಕ್ಕರೆ ನಾನೇ ಇಂಡಿಯಾ ಒಕ್ಕೂಟದ ನೇತೃತ್ವವನ್ನು ವಹಿಸಿಕೊಳ್ಳುವೆ’’ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದರೂ ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರಿದೆ. ಜಮ್ಮು-ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪ್ರದರ್ಶನ ಹೀನಾಯವಾಗಿದೆ. ಹಾಗಾಗಿ, ಕಾಂಗ್ರೆಸ್ ನಾಯಕತ್ವದ ಮೇಲೆ ಎನ್ ಸಿಪಿ, ಆರ್ ಜೆಡಿ, ನ್ಯಾಷನಲ್ ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಖರ್ಗೆ, ರಾಹುಲ್ ನಾಯಕತ್ವದ ಮೇಲೆ ಮುನಿಸಿಕೊಂಡಿವೆ.
ಚುನಾವಣೆಗಳಲ್ಲಿ ಸೋಲನುಭವಿಸಿದ ಬಳಿಕ ಇವಿಎಂಗಳ ಪಾರದರ್ಶಕತೆ ಮೇಲೆ ಆರೋಪ ಮಾಡುವುದು ಕಾಂಗ್ರೆಸ್ಸಿಗೆ ರೂಢಿಯಾಗಿದೆ. ಆದರೆ, ಇದೇ ಈಗ ರಾಹುಲ್ ಗಾಂಧಿ ಹಾಗೂ ಕಾಂಗ್ರಸ್ಸಿಗೆ ಮುಳುವಾಗಿದೆ. ಇವಿಎಂಗಳು ಹೇಗೆ ದೋಷಪೂರಿತವಾಗಿವೆ ಎಂಬುದನ್ನು ಮೊದಲು ಕಾಂಗ್ರೆಸ್ ಸಾಬೀತುಪಡಿಸಲಿ. ಪ್ರಾಯೋಗಿಕವಾಗಿ ಕಾಂಗ್ರೆಸ್ ಸಾಬೀತುಪಡಿಸಬೇಕು ಎಂದು ಜಮ್ಮು-ಕಾಶ್ಮಿರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಟಿಎಂಸಿ ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದೆ. ಹಾಗಾಗಿ, ಇವಿಎಂ ವಿಚಾರದಲ್ಲಿ ಕೂಡ ಕಾಂಗ್ರೆಸ್ ಈಗ ಏಕಾಂಗಿಯಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೈತ್ರಿ ಮುರಿಯುತ್ತದೆ ಎಂದು ಇಂಡಿಯಾ ಒಕ್ಕೂಟದ ಪಕ್ಷಗಳು ಆರೋಪಿಸಿದ್ದವು. ಆದರೀಗ ಇಂಡಿಯಾ ಒಕ್ಕೂಟದಲ್ಲೇ ಮೂಡಿದ ಬಿರುಕು ದೊಡ್ಡದಾಗಿದೆ. ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಇಂಡಿಯಾ ಒಕ್ಕೂಟದ ಪ್ರತಿಭಟನೆಗೂ ಟಿಎಂಸಿ ಬೆಂಬಲ ನೀಡದಿರುವುದು ಕಚ್ಚಾಟವನ್ನು ಬಿಚ್ಚಿಟ್ಟಂತಿದೆ. . ಮತ್ತೊಂದೆಡೆ, ಇಂಡಿಯಾ ಒಕ್ಕೂಟದ ಬಿಕ್ಕಟ್ಟಿನಿಂದ ಬಿಜೆಪಿ ಲಾಭ ಪಡೆಯುತ್ತಿದೆ. ಮತ್ತೊಂದೆಡೆ, ಎನ್ ಡಿಎ ತಮ್ಮ ಮೈತ್ರಿಕೂಟವನ್ನು ಭದ್ರವಾಗಿಟ್ಟುಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಭಿನ್ನಮತವು ದಿನೇದಿನೆ ಕಾವು ಪಡೆದುಕೊಳ್ಳುತ್ತಿದ್ದು, ಮಮತಾ ಬ್ಯಾನರ್ಜಿಯವರೇ ಒಕ್ಕೂಟದ ನೇತೃತ್ವ ವಹಿಸುತ್ತಾರಾ? ಇಲ್ಲವೇ, ಇಡೀ ಒಕ್ಕೂಟವೇ ಛಿದ್ರ ಛಿದ್ರವಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.