ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಈ ಕುರಿತು ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಈ ಕುರಿತು ಮನವಿ ಮಾಡಿದ್ದರು. ಹೀಗಾಗಿ ಸಿಎಂ ಆದೇಶಿಸಿದ್ದಾರೆ. ಚಾಮುಂಡೇಶ್ವರಿ ದೇವಿ ಕನ್ನಡಿಗರ ಆರಾಧ್ಯದೇವಿ. ದೇವಿಯ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಹೀಗಾಗಿ ಹೆಚ್ಚಿನ ಭಕ್ತರು ತಾಯಿಯನ್ನು ಆರಾಧಿಸುತ್ತಾರೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ” ಎಂದು ದಿನೇಶ್ ಗೂಳಿಗೌಡ ಸಿಎಂಗೆ ಮನವಿ ಸಲ್ಲಿಸಿದ್ದರು.
ಚಾಮುಂಡೇಶ್ವರಿ ದೇವಸ್ಥಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಹಿಂದೆ ದೇವಿಯ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಚಾಮುಂಡೇಶ್ವರಿ ಕ್ಷೇತ್ರವೆಂಬ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. ಚಾಮುಂಡಿ ಬೆಟ್ಟ ಅಭಿವೃದ್ಧಿಯಲ್ಲಿ ಹೊಯ್ಸಳ, ವಿಜಯನಗರ ಅರಸರ ಕೊಡುಗೆಯಿದೆ.
1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು . ‘ಸಿಂಹವಾಹನ’ ರಥವನ್ನು ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. ‘ಸಿಂಹ ವಾಹನ’ ವನ್ನು ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದೆ. ಈಗ ಚಿನ್ನದ ರಥ ನಿರ್ಮಿಸಲು ಸರ್ಕಾರ ಮುಂದಾಗಿದೆ.