ಬೆಂಗಳೂರು: ಸನಾತನ ಧರ್ಮದಲ್ಲಿ ಗಣಪತಿ ಪೂಜೆ ಬಳಿಕ ಎಲ್ಲಾ ಪೂಜೆ ಆರಂಭ ಆಗುತ್ತದೆ. ಯಾವುದೇ ಪೂಜೆ ಮಾಡಬೇಕಾದರೆ ಗಣಪತಿಯ ಒಪ್ಪಿಗೆ ಪಡೆಯಬೇಕು. ಆದರೆ ಇಂದು ಗಣಪತಿ ಪೂಜೆಗೆ ಒಪ್ಪಿಗೆ ತೆಗೆದುಕೊಳ್ಳಬೇಕಾಗಿದೆ. ಅಂತಹ ಕೆಟ್ಟ ಕಾನೂನು ಈ ದೇಶದಲ್ಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆ ಗಣೇಶೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಚಾಮುಂಡಿ ಬೆಟ್ಟ ಸರ್ಕಾರದ್ದು ಎಂದು ತಿಳಿದುಕೊಳ್ಳುವವರು, ದೇಶಕ್ಕೆ ಸಂಬಂಧಿಸಿದ ಆಸ್ತಿ ಯಾವುದೇ ಕೋಮಿಗೆ ಸೇರಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸುವುದರ ಬಗ್ಗೆ ಮಾತನಾಡಿದ ಯತ್ನಾಳ್, ಗಣಪತಿ ಎಲ್ಲಿ ಕೂರಿಸಬೇಕು ಎನ್ನುವುದನ್ನು ಸರ್ಕಾರ ನಿರ್ಧಾರ ಮಾಡುವುದಿಲ್ಲ, ನಮ್ಮ ಹಿರಿಯ ಅಧಿಕಾರಿಗಳು ನಮ್ಮೊಂದಿಗಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಇವರ ಜನಸಂಖ್ಯೆ ಶಾಸ್ತ್ರ, ಮತದಾರ ಸಂಖ್ಯಾಶಾಸ್ತ್ರ ನಮ್ಮ ಕ್ಷೇತ್ರದಲ್ಲಿಯೂ ಇದೆ. ನಮ್ಮ ಬಿಜಾಪುರದಲ್ಲಿ ಮತದಾನದ ದಿನ ಯಾರು ಹೊರಗೆ ಹೋಗದೆ ಮತದಾನ ಮಾಡುತ್ತಾರೆ. ಇದರ ಪರಿಣಾಮ ಫಲಿತಾಂಶ ಬದಲಾಗುತ್ತದೆ. ಹೀಗಾಗಿ ಬಿಜಾಪುರದಲ್ಲಿ ಗಣಪತಿ ಕೂರಿಸಲು ಯಾವುದೇ ಅನುಮತಿ ಬೇಕಿಲ್ಲ ಎಂದು ಗುಡುಗಿದ್ದಾರೆ.
ಆದರೆ, ಹಲವೆಡೆ ಶಾಂತಿ ಸಭೆಗಳಾಗುತ್ತದೆ, ಅಲ್ಲಿ ನಿರ್ಣಯವಾಗುತ್ತದೆ, ಈ ಎಲ್ಲಾ ಕಾನೂನು ಹೋಗಬೇಕಾದರೆ 2028ಕ್ಕೆ ಹಿಂದೂ ಪರ ಸರ್ಕಾರ ಆಡಳಿತಕ್ಕೆ ಬರಬೇಕು. ಮುಸ್ಲಿಂ ಪರ ಇರುವ ಸರ್ಕಾರ ಕಿತ್ತು ಹೋಗಬೇಕು. ಇಲ್ಲಿಯೂ ಸಹ ಮುಂದಿನ ಚುನಾವಣೆಯಲ್ಲಿ ಹಿಂದೂ ಅಭ್ಯರ್ಥಿ ಆರಿಸಿ ಬರಬೇಕು. 2028ಕ್ಕೆ ಆದರೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸುವ ಸರ್ಕಾರ ಬರಬೇಕು ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.