ಗದಗ: ಎಂಥವರಿಗೆ ಆದರೂ ಪೊಲೀಸರೆಂದರೆ ಭಯ ಇದ್ದೇ ಇರುತ್ತದೆ. ಅದರಲ್ಲೂ ಕಳ್ಳರಿಗೆ ತುಸು ಹೆಚ್ಚಾಗಿಯೇ ಇರಬೇಕು. ಆದರೆ, ಇಲ್ಲೊಬ್ಬ ಖದೀಮ, ಪೊಲೀಸ್ ಠಾಣೆಯಲ್ಲೇ ಕಳ್ಳತನ ಮಾಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರು ಅವರದ್ದೇ ಮೊಬೈಲ್ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮುಲ್ಲಾ ಎಂಬ ಖದೀಮ ಕಳ್ಳತನ ಮಾಡಿದ್ದಾನೆ.
ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಮಾತನಾಡುತ್ತಿದ್ದಾಗ ಅವರ ಮೊಬೈಲ್ ಎಗರಿಸಿದ್ದಾನೆ. ಹೋಟೆಲ್ ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದ. ಬಿಲ್ ಕೊಡದೆ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್ ಗೆ ಬಂದಿದ್ದ ಎನ್ನಲಾಗಿದೆ. ಈ ಹಗ್ಗೆ ವಿಚಾರಣೆ ನಡೆಯುತ್ತಿದ್ದಾಗ ಮೊಬೈಲ್ ಕದ್ದಿದ್ದಾನೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.